

ಮಂಗಳೂರು: ಭಾರತೀಯ ಜನತಾ ಪಾರ್ಟಿ ರಕ್ತದಾನ, ವೈದ್ಯಕೀಯ ಶಿಬಿರ, ವನಮಹೋತ್ಸವ ಮೊದಲಾದ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಜಲ್ಲಿಗುಡ್ಡೆಯಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಇದರ ವತಿಯಿಂದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹದ ಪ್ರಯುಕ್ತ ಭಾನುವಾರ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡು ಇಂತಹ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ, ಊರಿನ ಜನರ ಆರೋಗ್ಯ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ರಾಷ್ಟ್ರೀಯ ನಾಯಕರು ನೀಡಿದ ಕರೆಯಂತೆ ಸೇವಾ ಕಾರ್ಯಕ್ರಮಗಳು ಸಾಮಾನ್ಯ ಕಾರ್ಯಕರ್ತರಿಂದ ಸಾಧ್ಯವಾಗಿದೆ ಎಂದರು.
ಬಿಜೆಪಿ ಹಿಂದುಳಿದ ಮೋರ್ಚಾ ದಕ್ಷಿಣ ಮಂಡಲದ ಅಧ್ಯಕ್ಷ ದಿವಾಕರ ಪಾಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ದಕ್ಷಿಣ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಜಲ್ಲಿಗುಡ್ಡೆಯಂತಹ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಇಲ್ಲಿನ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವುದು ಇದರ ಉದ್ದೇಶ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಮುಖ್ಯ ಅತಿಥಿಯಾಗಿದ್ದರು. ಆರೋಗ್ಯ ಪ್ರತಿಯೊಬ್ಬರ ಸಂಪತ್ತು. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ವಿಚಾರ ಎಂದರು.
ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಉಪಾಧ್ಯಕ್ಷ ಅಜಯ್ ರಾವ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ದಕ್ಷಿಣ ಮಂಡದಲ ನಿಕಟಪೂರ್ವಾಧ್ಯಕ್ಷ ವಿಜಯಕುಮಾರ್, ಶ್ರೀನಿವಾಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೀರೇಂದ್ರ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ರಾವ್, ದಕ್ಷಿಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ನಿಡ್ಡೇಲ್, ಮನಪಾ ಸದಸ್ಯೆ ಶೋಭಾ ಪೂಜಾರಿ, ಮಾಜಿ ಉಪಮೇಯರ್ ಪೂರ್ಣಿಮಾ, ಮುಖಂಡರಾದ ಅಶ್ವಿತ್ ಕೊಟ್ಟಾರಿ, ಲಲ್ಲೇಶ್, ಕಿರಣ್ ರೈ, ಶಿವಾಜಿ ರಾವ್, ರಮೇಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.