ಆಭರಣ ಮಂಗಳೂರು ಮಳಿಗೆಗಳ ಮೇಲೆ ಐಟಿ ದಾಳಿ

abharana
Published on

ಮಂಗಳೂರು: ಆಭರಣ ಸಂಸ್ಥೆಯ ಮಂಗಳೂರು ನಗರದಲ್ಲಿರುವ ಎರಡು ಮಳಿಗೆಗಳ ಮೇಲೆ ಮಂಗಳವಾರ ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಮಲ್ಲಿಕಟ್ಟೆಯ ಶಿವಭಾಗ್ ಹಾಗೂ ಮಣ್ಣಗುಡ್ಡ ರಸ್ತೆಯಲ್ಲಿರುವ ಆಭರಣ ಮಳಿಗೆಗಳಿಗೆ ಐದಾರು ಮಂದಿ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಸ್ಥೆಯ ಮಾಲೀಕರಿಗೆ ಹಾಗೂ ಎಂದಿನಂತೆ ಕರ್ತವ್ಯಕ್ಕೆ ಬಂದ ಸಂಸ್ಥೆಯ ಸಿಬ್ಬಂದಿಗೆ ಶಾಕ್ ಆಗಿದೆ.
ಅಧಿಕಾರಿಗಳು ಜುವೆಲ್ಲರಿ ಸಂಸ್ಥೆಯ ವಹಿವಾಟು, ಆಸ್ತಿ, ತೆರಿಗೆ ಸಂಗ್ರಹ ವಿಚಾರದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೊರಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಬಾಡಿಗೆ ಟ್ಯಾಕ್ಸಿಗಳಲ್ಲಿ ಬಂದ ಅಧಿಕಾರಿಗಳು ಮಳಿಗೆಗಳಿಗೆ ಬಾಗಿಲು ಹಾಕಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.


ಉಡುಪಿ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಭರಣ ಜುವೆಲ್ಲರಿ ಸಂಸ್ಥೆ ಹದಿನೈದು ವರ್ಷಗಳ ಮೊದಲಿಗೆ ಉಡುಪಿಯಲ್ಲಿ ಆರಂಭಗೊಂಡಿತ್ತು. ಉಡುಪಿ, ಪಡುಬಿದ್ರಿ, ಬ್ರಹ್ಮಾವರ, ಕಾರ್ಕಳ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಶಿವಮೊಗ್ಗದ ಮಳಿಗೆಗಳಿಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆ ಗೋವಾದಲ್ಲೂ ಮಳಿಗೆಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net