ಹೈಕೋರ್ಟ್ ಪೀಠ ಸ್ಥಾಪನೆಗೆ ಮಂಗಳೂರು ಸೂಕ್ತ

Btw_Highcourt
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ವ್ಯವಸ್ಥೆಗಳು ಕರಾವಳಿಯಲ್ಲಿರುವುದರಿಂದ ಹೈಕೋರ್ಟ್ ಪೀಠ ಸ್ಥಾಪನೆಗೆ ಮಂಗಳೂರು ಹೆಚ್ಚು ಸೂಕ್ತ. ಹಲವು ವರ್ಷಗಳ ಈ ಕನಸು ನನಸಾಗಬೇಕಾದರೆ ಜನ ಸಮಾಲೋಚನೆಯ ಜತೆಗೆ ಜನಾಂದೋಲನವು ಆಗಬೇಕು ಎಂದು ಹೈಕೋರ್ಟ್ ಪೀಠ ಹೋರಾಟ ಸಮಿತಿ ದ.ಕ.ಜಿಲ್ಲಾ ಪ್ರಧಾನ ಸಂಚಾಲಕ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಹೈಕೋರ್ಟ್ ಪೀಠ ಹೋರಾಟ ಸಮಿತಿ ದ.ಕ. ಜಿಲ್ಲೆ ಹಾಗೂ ವಕೀಲರ ಸಂಘ ಬಂಟ್ವಾಳ ವತಿಯಿಂದ ಬಿ.ಸಿ.ರೋಡಿನ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ವಕೀಲರ ಸಂಘದ ಪದಾಧಿಕಾರಿಗಳ ಸಮಾಲೋಚನ ಸಭೆ ಉದ್ಘಾಟಿಸಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟದ ಪ್ರಯತ್ನಕ್ಕೆ ಈಗ ಸಮಯ ಕೂಡಿ ಬಂದಿದೆ. ಇದರ ರೂಪುರೇಷೆಯನ್ನು ಕಾರ್ಯರೂಪಕ್ಕೆ ತರುವ ಕೇಲಸ ಆಗಬೇಕಿದೆ ಎಂದರು. ಸಾಮಾನ್ಯ ಜನರನ್ನು ಹೋರಾಟದಲ್ಲಿ ಸೇರಿಸಿಕೊಂಡು ಚುರುಕು ಮುಟ್ಟಿಸುವ ಕಾರ್ಯ ಆಗಬೇಕಾಗಿದೆ. ಏಳು ಜಿಲ್ಲೆಗಳನ್ನು ಸಂಘಟಿಸುವ ಕಾರ್ಯ ಜಿಲ್ಲೆಯಿಂದಲೇ ಆರಂಭಗೊಳ್ಳಬೇಕಾಗಿದೆ ಎಂದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, 1981ರಿಂದಲೂ ಕರಾವಳಿ ಭಾಗಕ್ಕೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಆಗಬೇಕು ಎನ್ನುವ ಹೋರಾಟ ನಿರಂತರವಾಗಿ ನಡೆಯತ್ತಿದೆ. ಮುಂದಿನ ದಿನಗಳಲ್ಲಿ ಪೋಸ್ಟ್‌ಕಾರ್ಡ್ ಚಳವಳಿ, ಸಹಿ ಸಂಗ್ರಹ ಅಭಿಯಾನ ನಡೆಯಲಿದ್ದು ಎಲ್ಲರೂ ಸಹಕರಿಸಬೇಕು. ಅಂತೆಯೇ ಸಾರ್ವಜನಿಕರು ಕೂಡ ಈ ಹೋರಾಟದಲ್ಲಿ ಸೇರಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ಹಿರಿಯ ವಕೀಲ ಎಂ.ಪಿ.ನೊರೋನ್ಹ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟದ ರೂಪುರೇಷೆಯನ್ನು ತಿಳಿಸಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್, ಮಾಜಿ ಅಧ್ಯಕ್ಷ ಭಾಸ್ಕರ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು. ಐವನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ವಕೀಲರ ಸಂಘದ ವತಿಯಿಂದ ಎರಡು ಮನವಿಗಳನ್ನು ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಸೋಜಾ ಸ್ವಾಗತಿಸಿದರು. ಬಿ.ವಿ.ಶೆಣೈ ವಂದಿಸಿದರು. ರವೀಂದ್ರ ಕುಕ್ಕಾಜೆ ನಿರೂಪಿಸಿದರು. ಬಿ.ವಿ.ಶೆಣೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net