ಪ್ರವಾಸೋದ್ಯಮ ಅಭಿವೃದ್ಧಿಗೆ 50 ಕೋಟಿ ರೂ; ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟಿಸಿ ಸಚಿವ ಸುರೇಶ್ ಬೈರತಿ ಘೋಷಣೆ
ಮಂಗಳೂರು ಎಮ್ಮೆಕೆರೆಯಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಶನಿವಾರ ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು , ಎಂಎಲ್ಸಿ ಮಂಜುನಾಥ ಭಂಡಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಆನಂದ್ ಕೆ., ಪಾಲಿಕೆ ಆಯುಕ್ತ ಆನಂದ್, ಸ್ಮಾರ್ಟ್ ಸಿಟಿ ಎಂಡಿ ರಾಜು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಿಕೊಂಡು ಬನ್ನಿ. 50 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿ ಘೋಷಿಸಿದರು.
ಎಮ್ಮೆಕೆರೆಯಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಮತ್ತು ನೂತನ ಈಜುಕೊಳದಲ್ಲಿ 19ನೇ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್‌ಷಿಪ್ ಈಜು ಸ್ಪರ್ಧೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪ್ರವಾಸಿಗರನ್ನು ಮಂಗಳೂರು ಕಡೆಗೆ ಹೆಚ್ಚು ಆಕರ್ಷಿಸುವ ರೀತಿಯಲ್ಲಿ ಯೋಜನೆ ರೂಪಿಸುವ ಕುರಿತು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಕೋರಿದ್ದಾರೆ. ಅವರ ಜತೆ ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು, ಮೇಯರ್ ಸಮಾಲೋಚನೆ ನಡೆಸಿ ಸರ್ಕಾರಿ ಜಾಗದಲ್ಲಿ ಅನುಷ್ಠಾನಗೊಳಿಸಬಹುದಾದ ಹೊಸ ಪ್ರವಾಸೋದ್ಯಮ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಿದರು.
ಕೇಂದ್ರದ ಅನುಮೋದನೆ ಒದಗಿಸಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಇಲ್ಲಿಯ ತನಕ 749 ಕೋಟಿ ರೂ. ಅನುದಾನ ಖರ್ಚಾಗಿದೆ. ಪ್ರಸ್ತುತ 24 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಮೂರು ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ದೊರೆಯಬೇಕಿದೆ. ಸಂಸದರು ಈ ಕುರಿತು ಗಮನಹರಿಸಿ ಅನುಮತಿ ಕೊಡಿಸಿದರೆ ಸ್ಮಾರ್ಟ್ ಸಿಟಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಉಳ್ಳಾಲ- ಮಂಗಳೂರು ನಡುವೆ ಸುಲಭ ಸಂಪರ್ಕ ಒದಗಿಸುವ ಸಲುವಾಗಿ ಜಪ್ಪು ಕುಡ್ಪಾಡಿ ಗೇಟಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ನಂತೂರಲ್ಲೂ ವಾಹನ ದಟ್ಟಣೆ ಸಮಸ್ಯೆ ಇದೆ. ಜನರ ಸುಲಭ ಸಂಚಾರ ಸಾಧ್ಯವಾಗದ ಹೊರತು ಪ್ರದೇಶದ ಅಭಿವೃದ್ಧಿ ಅಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸ್ಮಾರ್ಟ್ ಸಿಟಿಯಡಿ ರಿವರ್‌ರ್ಂಟ್ ಯೋಜನೆಗೆ ಬಂದರು ಇಲಾಖೆ ಜಾಗ ಬಿಟ್ಟುಕೊಡಬೇಕಿದೆ. ಈ ಬಗ್ಗೆ ಸಚಿವರು ಕ್ರಮ ಕೈಗೊಳ್ಳಬೇಕು. ಕದ್ರಿಪಾರ್ಕ್ ಬಳಿಯ ಅಂಗಡಿಗಳಿಗೆ ಈ ಹಿಂದಿನ ಸರಕಾರ ಇದ್ದಾಗ ಸಿಂಗಲ್ ಟೆಂಡರ್ ಆದ ಕಾರಣ ಕೊಠಡಿ ಹಂಚಿಕೆ ಸಾಧ್ಯವಾಗಲಿಲ್ಲ. ಇದೀಗ ನಿರ್ದಿಷ್ಟ ವ್ಯಕ್ತಿಗೆ ಅಂಗಡಿಗಳನ್ನು ಹಂಚಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾಗಲು ಸಚಿವರು ಅವಕಾಶ ನೀಡಬಾರದು ಎಂದರು. ಸ್ಥಳೀಯ ಸಂಸದರು ಮಾತನಾಡಿ, ನಗರದಲ್ಲಿ ವಾಟರ್ ಫ್ರಂಟ್ ಯೋಜನೆಗೆ ಗುರುತಿಸಲಾದ ಸರ್ಕಾರಿ ಜಾಗ ಖಾಸಗಿಯವರಿಂದ ಅತಿಕ್ರಮಣ ಆಗಿದೆ. ಸಚಿವರು ಈ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ನಂತೂರಿನಲ್ಲಿ ಫ್ಲೈಓವರ್ ಕಾಮಗಾರಿಗೆ ಟೆಂಡರ್ ಆಗಿದೆ. ಎಲ್ಲ ಯೋಜನೆಗಳು ಪೂರ್ಣಗೊಳ್ಳುವಾಗ ಪಾಲಿಕೆ ಆಸ್ತಿ ನಿರ್ಮಾಣ ಉದ್ದೇಶ ಕೂಡ ಈಡೇರಲಿದೆ ಎಂದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಎಂಎಲ್ಸಿ ಮಂಜುನಾಥ ಭಂಡಾರಿ, ಉಪಮೇಯರ್ ಸುನೀತಾ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಆನಂದ್ ಕೆ., ಪಾಲಿಕೆ ಆಯುಕ್ತ ಆನಂದ್, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ್, ಅಬ್ದುಲ್ ಲತೀಫ್, ಸ್ವಿಮ್ಮಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ತೇಜೋಮಯ ಉಪಸ್ಥಿತರಿದ್ದರು. ಸ್ಮಾರ್ಟ್ ಸಿಟಿ ಎಂಡಿ ರಾಜು ಸ್ವಾಗತಿಸಿದರು.
ಸ್ಮಾರ್ಟ್‌ಸಿಟಿ ಕಾಮಗಾರಿಗೆ ಅಪಸ್ವರ ಮಂಗಳೂರಿನ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಜನರಿಗೆ ಲಾಭ ಬರೋ ಯೋಜನೆ ಮಾಡಿಲ್ಲ. ಪಾಲಿಕೆಗೆ ಲಾಭ ಬರೋ ಯೋಜನೆ ಮಾಡಿಲ್ಲ. ಈ ಯೋಜನೆ ಅನುಷ್ಠಾನಗೊಂಡಿರುವ ಇತರ ಕಡೆಗಳಲ್ಲಿ ನಾವು ಪಾಲಿಕೆಗಳಿಗೆ ಶಾಶ್ವತ ಆದಾಯ ತರುವ ಯೋಜನೆ ರೂಪಿಸಿದ್ದೇವೆ. ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಕನಿಷ್ಠ 100 ಕೋಟಿ ರೂ. ಇಡಬೇಕಿತ್ತು ಎಂದು ಸಚಿವ ಸುರೇಶ್ ಬೈರತಿ ಅಭಿಪ್ರಾಯಪಟ್ಟರು. ಬೇರೆ ಸ್ಮಾರ್ಟ್ ಸಿಟಿಗಳಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮಾರುಕಟ್ಟೆ ಇತ್ಯಾದಿ ಮಾಡಲಾಗಿದೆ. ಮಂಗಳೂರು ವೈದ್ಯಕೀಯ, ಶಿಕ್ಷಣ ಕ್ಷೇತ್ರಗಳ ಹಬ್. ಈ ಹಿನ್ನೆಲೆಯಲ್ಲಿ ಏನಾದರೂ ಆಸ್ತಿ ನಿರ್ಮಿಸಬಹುದಿತ್ತು. ಮುಂದಿನ ದಿನಗಳಲ್ಲಿ ಪಾಲಿಕೆಗೂ, ಜನರಿಗೂ ಲಾಭವಾಗುವ ಯೋಜನೆ ರೂಪಿಸೋಣ ಎಂದು ಹೇಳಿದರು.