

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿದ್ದು ಹೋಗಿದ್ದ ಮಗುವಿನ ಚಿನ್ನದ ಸರ ಸಿಐಎಸ್‌ಎಫ್ ಅಧಿಕಾರಿಗಳ ಸಕಾಲಿಕ ಪ್ರಯತ್ನದಿಂದ ಮತ್ತೆ ಮಗುವಿಗೆ ಸೇರುವಂತಾಗಿದೆ.
ಎರಡು ದಿನಗಳ ಹಿಂದೆ ರಚನಾ ಮಾರ್ಲ ಎಂಬವರು ತನ್ನ ಮಗುವಿನ ಜತೆ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಆಗಿ ವಿಮಾನದ ಬಳಿ ತಲುಪುತ್ತಿದ್ದಂತೆ ಮಗುವಿನ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬಳಿಕ ಹೊರಗೆ ಬಂದು ಸರ ಬಿದ್ದು ಹೋಗಿದೆಯೇ ಎಂದು ಪರಿಶೀಲನೆ ಮಾಡುವುದಕ್ಕೆ ಸಮಯ ಇರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಭದ್ರತಾ ಅಧಿಕಾರಿಗೆ ದೂರು ನೀಡಿ ಬೆಂಗಳೂರಿಗೆ ಪ್ರಯಾಣಿಸಿದ್ದರು.
ಸಿಐಎಸ್‌ಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಿಮಾನ ನಿಲ್ದಾಣದ ಮೇಲಂತಸ್ತಿನಲ್ಲಿ ಕಾರಿನಿಂದ ಇಳಿದು ಒಳಗೆ ಬರುವಾಗಲೇ ಮಗುವಿನ ಸರ ಬಿದ್ದು ಹೋಗಿರುವುದು ಕಂಡು ಬಂದಿದೆ. ಆ ಸರವನ್ನು ಇನ್ನೊಬ್ಬ ವಾಹನದ ಚಾಲಕ ಹೆಕ್ಕಿ ತನ್ನ ಜೊತೆ ತೆಗೆದುಕೊಂಡು ಹೋಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಹೀಗಾಗಿ ಆ ವಾಹನದ ನಂಬರ್ ಮೂಲಕ ಚಾಲಕನನ್ನು ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ಈ ವೇಳೆ ಸರ ಬಿದ್ದು ಸಿಕ್ಕಿರುವುದನ್ನು ಒಪ್ಪಿಕೊಂಡ ಚಾಲಕ ಅದನ್ನು ವಾರಸುದಾರರಿಗೆ ನೀಡಲು ಸಿದ್ದವಿರುವುದಾಗಿ ತಿಳಿಸಿದ್ದ.
ಸಿಐಎಸ್‌ಎಫ್ ಕಡೆಯಿಂದ ಮರಳಿ ಆ ಮಹಿಳೆಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ತನಗೆ ಸರ ಸಿಕ್ಕಿದರಾಯಿತು. ದೂರು ಕೊಡುವ ಆಸಕ್ತಿ ಇಲ್ಲ ಎಂದು ಮಹಿಳೆ ತಿಳಿಸಿದ ಕಾರಣ ಸಿಐಎಸ್‌ಎಫ್ ಅಧಿಕಾರಿಗಳು ಚಾಲಕನನ್ನು ಕರೆಸಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆಯಿಸಿ, ಚಿನ್ನದ ಸರ ಪಡೆದು ಬಿಟ್ಟು ಕಳುಹಿಸಿದ್ದಾರೆ. ಮಹಿಳೆಯ ಕುಟುಂಬಸ್ಥರು ಬಳಿಕ ವಿಮಾನ ನಿಲ್ದಾಣಕ್ಕೆ ಬಂದು ಚಿನ್ನದ ಸರ ಪಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಹಿಳೆ ವಿಡಿಯೋ ಮಾಡಿದ್ದು, ಸಿಐಎಸ್‌ಎಫ್ ಭದ್ರತಾ ಅಧಿಕಾರಿಗಳು ಒಂದೇ ದಿನದಲ್ಲಿ ಸಿಸಿಟಿವಿ ನೋಡಿ ಸರ ಪತ್ತೆ ಮಾಡಿರುವ ಜತೆಗೆ ಕುಟುಂಬದವರನ್ನು ಕರೆಸಿ ಅವರ ಕೈಗೆ ಒಪ್ಪಿಸಿದ್ದಾರೆ. ಆ ಸರದ ಜೊತೆಗೆ ಭಾವನಾತ್ಮಕ ನಂಟಿದೆ. ಅದಕ್ಕಾಗಿ ಪತ್ತೆ ಮಾಡಿ ಸರ ಮರಳಿಸಿದ ಭದ್ರತಾ ಅಧಿಕಾರಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.