

ಮಂಗಳೂರು : ಸರ್ಕಾರವು ಶೀಘ್ರದಲ್ಲಿ ವೈದ್ಯಕೀಯ ವೃತ್ತಿ ಮತ್ತು ಸೇವೆ ಸಲ್ಲಿಸುವ ಚಿಕಿತ್ಸಾಲಯದಲ್ಲಿ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವ ನೂತನ ಕಾನೂನು ಮತ್ತು ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ನಿವೃತ್ತ ಸಹಾಯಕ ಪೋಲೀಸ್ ಆಯುಕ್ತ ಅಶೋಕನ್ ಕೆ.ಸಿ. ಹೇಳಿದರು.
ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಗುರುವಾರ ಭಾರತೀಯ ನ್ಯಾಯ ಸಂಹಿತೆ ಕುರಿತು ವೈದ್ಯಕೀಯ ಕಾನೂನಿನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಅರುಣ ಯಡಿಯಾಲ್ ಸಂಪಾದಕ್ವದ ಸಂಸ್ಥೆಯ ಪ್ರಥಮ ಗೃಹ ವಾರ್ತಾ ಪತ್ರಿಕೆ ಎಮಿಕಸ್ ಮತ್ತು ಡಾ.ರಘುವೀರ್ ಸಂಪಾದಕತ್ವದ ಸಂಸ್ಥೆಯ ಸದಸ್ಯರ ನೂತನ ಕೈಪಿಡಿಯನ್ನು ಅವರು ಈ ಸಂದರ್ಭ ಅನಾವರಣಗೊಳಿಸಿದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಕೀಲರಾದ ಕೆ.ಪೃಥ್ವಿರಾಜ್ ರೈ ಮತ್ತು ವಿವೇಕಾನಂದ ಪಣೆಯಾಲ ಭಾರತೀಯ ನ್ಯಾಯ ಸಂಹಿತೆಯಲ್ಲಿ ವೈದ್ಯಕೀಯ ವೃತ್ತಿ ಸೇವೆ ಸಲ್ಲಿಸುವವರಿಗೆ ಅನ್ವಯವಾಗುವ ರಕ್ಷಣೆ, ಭದ್ರತೆ ಮತ್ತು ವೈದ್ಯರ ನಿರ್ಲಕ್ಷೃದಿಂದ ರೋಗಿಗಳ ಮೇಲೆ ಆಗುವ ಅಪರಾಧ, ಅನಾಹುತ, ನಿಬಂಧನೆ ಹಾಗೂ ಶಿಕ್ಷಾರ್ಹತೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಸದಸ್ಯರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂಸ್ಥೆಯ ಅಧ್ಯಕ್ಷೆ ಡಾ.ವತ್ಸಲಾ ಕಾಮತ್ ಸ್ವಾಗತಿಸಿದರು. ಪೊಲೀಸ್ ಉಪನಿರೀಕ್ಷಕ ವಿನಾಯಕ್ ತೋರಗಲ್, ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಾನದ ಅಧ್ಯಕ್ಷ ಡಾ.ದಿವಾಕರ ರಾವ್, ಡಾ. ಸತೀಶ್ ಭಟ್, ಡಾ. ಪ್ರಕಾಶ್ ಹರಿಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಜಯಪ್ರಕಾಶ್ ಕೆ.ಪಿ. ಸಂಸ್ಥೆಯ ವರದಿ ಮಂಡಿಸಿ ಬಳಿಕ ವಂದಿಸಿದರು. ಡಾ.ಚೈತ್ರ, ಡಾ.ಅನಿತ ಕಾರ್ಯಕ್ರಮ ನಿರೂಪಿಸಿದರು.