

ಮಂಗಳೂರು: ಸುರತ್ಕಲ್‌ನ ಚಿರಂತನ ಚಾರಿಟೆಬಲ್ ಟ್ರಸ್ಟ್,ಬೆಂಗಳೂರಿನ ಸಪ್ತಕ, ಕಲ್ಕತ್ತಾದ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿ ಹಾಗೂ ಮಂಗಳೂರಿನ ರಾಮಕೃಷ್ಣ ಮಠದ ಆಶ್ರಯದಲ್ಲಿ ಜ.12ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಆಯೋಜಿಸಲಾಗಿದೆ.
ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಬೆಳಗ್ಗೆ 9.50ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಿತಾರ್ ಮಾಂತ್ರಿಕ ಉಸ್ತಾದ್ ಶಾಹೀದ್ ಪರ್ವೇಜ್ ಪುಣೆ, ಗಾಯಕಿ ವಿದುಷಿ ಮಂಜೂಷಾ ಪಾಟಿಲ್ ಪುಣೆ, ಗಾಯಕರಾದ ಮುಂಬೈಯ ಧನಂಜಯ ಹೆಗಡೆ, ಕಲ್ಕತ್ತಾದ ಬ್ರಜೇಶ್ವರ್ ಮುಖರ್ಜಿ ಹಾಗೂ ಶತವಿಷಾ ಮುಖರ್ಜಿ ಅವರಿಂದ ಸಂಗೀತ ಕಛೇರಿ ನಡೆಯಲಿದೆ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ, ಭಾರವಿ ದೇರಾಜೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುಣೆಯ ಪಂಡಿತ್ ಮುಖೇಶ್ ಜಾಧವ್, ಬೆಂಗಳೂರಿನ ಗುರುಮೂರ್ತಿ ವೈದ್ಯ, ಗೋವಾದ ಮಾಯಾಂಕ್ ಬೆಡೇಕರ್, ಕಲ್ಕತ್ತಾದ ಆಶೀಷ್ ಪಾಲ್, ತಬಲಾದಲ್ಲಿ ಮುಂಬೈಯ ಸಿದ್ದೇಶ್ ಬಿಚೋಲ್ಕರ್ ಹಾಗೂ ಉಡುಪಿಯ ಪ್ರಸಾದ್ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಂಗೀತ ಪೋಷಕ ಹಾಗೂ ಆಯೋಜಕ ಜಿ.ಎಸ್. ಹೆಗಡೆ ಬೆಂಗಳೂರು, ಹಿರಿಯ ತಬಲಾ ಕಲಾವಿದ ಹಾಗೂ ಚಿತ್ರ ಕಲಾವಿದರೂ ಆಗಿರುವ ಪಂಡಿತ್ ಯಶವಂತ ಆಚಾರ್ಯರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ತೇಜಸ್ವಿ ಜೂನಿಯರ್ ಶಂಕರ್, ಸದಸ್ಯ ಸತೀಶ್ ಕಾಮತ್ ಉಪಸ್ಥಿತರಿದ್ದರು.