ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರ ಪ್ರದಕ್ಷಿಣೆ ಪದ್ಮಶ್ರೀ ಪುರಸ್ಕೃತ ಹಾಜಬ್ಬ - ಮಹಾಲಿಂಗ ನಾಯ್ಕರಿಂದ ಚಾಲನೆ

mng--21 dec Helicopter
Published on

ಮಂಗಳೂರು: ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ನಗರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹರೇಕಳ ಹಾಗೂ ಮಹಾಲಿಂಗ ನಾಯ್ಕ ಅವರು ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಮೂಲಕ ಚಾಲನೆ ನೀಡಿದರು.

ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿ.21ರಿಂದ 31ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಕಾಪ್ಟರ್ ಮಂಗಳೂರು ಆಸುಪಾಸಿನಲ್ಲಿ ಸುಮಾರು 5ರಿಂದ 7ನಿಮಿಷಗಳ ಕಾಲ ಆಕಾಶದಲ್ಲಿ ಒಂದು ಪ್ರದಕ್ಷಿಣೆ ಹಾಕಿ ಪುನಃ ಮೇರಿ ಹಿಲ್ ಗೆ ಮರಳುತ್ತದೆ. ಈ ಮೂಲಕ ತಲಾ 4500 ರೂ. ಶುಲ್ಕದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ವೀಕ್ಷಿಸಬಹುದಾಗಿದೆ.

ಹೆಲಿಟೂರಿಸಂಗೆ ಆದ್ಯತೆ: ಕರಾವಳಿ ಉತ್ಸವ ಸಂದರ್ಭ ಆಯೋಜಿಸಿದ ಹೆಲಿಕಾಪ್ಟರ್ ಪಯಣಕ್ಕೆ ಸಾರ್ವಜನಿಕರಿಂದ ಸಿಗುವ ಸ್ಪಂದನೆ ಆಧಾರದಲ್ಲಿ ಮುಂದೆ ಕೊಲ್ಲೂರು, ಶೃಂಗೇರಿ, ಸುಬ್ರಹ್ಮಣ್ಯ, ಧರ್ಮಸ್ಥಳ, ಬೇಲೂರು ಹಳೆಬೀಡು ಮೊದಲಾದ ಕಡೆಗಳಿಗೆ ಹೆಲಿಕಾಪ್ಟರ್ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಸಾರ್ವಜನಿಕರು ಪ್ರಯಾಣಿಸಿ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾತನಾಡಿ, ಹೆಲಿಕಾಫ್ಟರ್ ಪ್ರಯಾಣ ಅಧ್ಭುತ ಅನುಭವ. ಮಂಗಳೂರಿನ ನಿಸರ್ಗ ಮತ್ತು ಅಭಿವೃದ್ಧಿಯನ್ನು ವೀಕ್ಷಣೆಗೆ ಅವಕಾಶ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ ಅವರು ಹೆಲಿಕಾಫ್ಟರ್ ಪ್ರಯಾಣ ವಿಶೇಷ ಅನುಭವ ನೀಡಿದೆ. ಕರಾವಳಿಯ ಜನತೆ ಇದರ ಸದುಪಯೋಗ ಪಡೆಯಬೇಕು ಎಂದರು.

ಜಿ.ಪಂ. ಸಿಇಒ ಡಾ.ಆನಂದ್ ಕೆ., ಡಿಎಫ್‌ಒ ಆ್ಯಂಟನಿ ಮರಿಯಪ್ಪ, ಎಸ್ಪಿ ಯತೀಶ್ ಎನ್. ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net