

ಮಂಗಳೂರು: ನಗರದ ಹಂಪನಕಟ್ಟೆ ಸಮೀಪ ಗುರುವಾರ ಮಧ್ಯಾಹ್ನ ಖಾಸಗಿ ಬಸ್ ಚಾಲಕರೊಬ್ಬರಿಗೆ ರಕ್ತದೊತ್ತಡದಿಂದ ತಲೆಸುತ್ತು ಬಂದ ಕಾರಣ ಬಸ್ ನಿಯಂತ್ರಣ ತಪ್ಪಿ ರಿಕ್ಷಾ, ಕಾರು, ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಕರಣವಾಗಿಲ್ಲ.
ಜಪ್ಪು ಬಪ್ಪಾಲ್ ನಿವಾಸಿಗಳಾದ ಉಸ್ಮಾನ್,ರಮ್ಲಾ ಹಾಗೂ ಅವರ ಪುತ್ರ ಮೊಹಮ್ಮದ್ ನಝಲ್ ಗಾಯಗೊಂಡವರು.
ಉಸ್ಮಾನ್ ಅವರು ತನ್ನ ಪತ್ನಿ ಮತ್ತು ಮಗನ ಜತೆ ರಿಕ್ಷಾದಲ್ಲಿ ಮಂಗಳೂರಿಗೆ ಖರೀದಿಗಾಗಿ ಬಂದಿದ್ದರು. ಈ ಸಂದರ್ಭ ಪಿಟಿಸಿ ಬಸ್ ಬಲ್ಮಠ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುತ್ತಿದ್ದಾಗ ಬಸ್‌ನ ಚಾಲಕನಿಗೆ ಏಕಾಏಕಿ ರಕ್ತದೊತ್ತಡದಿಂದ ತಲೆ ಸುತ್ತು ಬಂದು ಬಿದ್ದಿದ್ದಾರೆ. ಈ ಸಂದರ್ಭ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಲಾದ ರಿಕ್ಷಾ, ಕಾರು, ಬೈಕ್‌ಗೆ ಡಿಕ್ಕಿಯಾಗಿದೆ.
ಈ ದೃಶ್ಯ ಇಲ್ಲಿನ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಿಕ್ಷಾ ನಜ್ಜುಗುಜ್ಜು: ಬಸ್ ಡಿಕ್ಕಿಯಾದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸರಣಿ ಅಪಘಾತದ ಭೀಕರತೆಯನ್ನು ಹೇಳುತ್ತಿತ್ತು. ರಿಕ್ಷಾದಲ್ಲಿದ್ದ ಮೂವರಿಗೂ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಸ್ಥಳಕ್ಕೆ ಕದ್ರಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.