

ಮಂಗಳೂರು: ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಅಂಗವಾಗಿ ಝೂಸ್ ಫಿಟ್ನೆಸ್ ಕೇಂದ್ರ, ಖೇಲೋ ಇಂಡಿಯಾ ಹಾಗೂ ಡೆಕತ್ಲಾನ್ ಸಹಭಾಗಿತ್ವದಲ್ಲಿ ಅ. 6ರಂದು ಬೆಳಗ್ಗೆ 5 ಗಂಟೆಗೆ ಕ್ಷೇತ್ರದಲ್ಲಿ ಹಾಪ್ ಮಾರಥಾನ್ ಆಯೋಜಿಸಲಾಗಿದೆ.
‘ವನ್ ಸಿಟಿ ವನ್ ಸ್ಪಿರಿಟ್’ ಧ್ಯೇಯದೊಂದಿಗೆ ದ.ಕ. ಜಿಲ್ಲೆಯನ್ನು ವ್ಯಸನಮುಕ್ತವನ್ನಾಗಿಸುವ ಪ್ರಯತ್ನವಾಗಿ 21 ಕಿ.ಮೀ., 10 ಕಿ.ಮೀ. ಹಾಗೂ 5 ಕಿ.ಮೀ.ಗಳ ಮೂರು ವಿಭಾಗಗಳಲ್ಲಿ ಹಾಪ್ ಮಾರಥಾನ್ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿಯ ಖಜಾಂಚಿ ಪದ್ಮರಾಜ್ ಆರ್. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿರುವ ಹಾಫ್ ಮ್ಯಾರಥಾನ್‌ನಲ್ಲಿ 21 ಕಿ.ಮೀ. ಪ್ರಥಮ ವಿಜೇತರಿಗೆ 25,000 ರೂ., ದ್ವಿತೀಯ ಬಹುಮಾನ 15,000 ರೂ. ಹಾಗೂ ತೃತೀಯ 10 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ನೋಂದಣಿ ಶುಲ್ಕ 589 ರೂ. ನಿಗದಿಪಡಿಸಲಾಗಿದೆ.
10 ಕಿ.ಮೀ. ಹಾಫ್ ಮ್ಯಾರಥಾನ್‌ಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಗುವುದು. ನೋಂದಣಿ ಶುಲ್ಕ 353 ರೂ. ನಿಗದಿಪಡಿಸಲಾಗಿದೆ. 5 ಕಿ.ಮೀ. 1 ರೂ. ನೋಂದಣಿ ಶುಲ್ಕ ವಿಧಿಸಲಾಗಿದೆ ಎಂದವರು ಹೇಳಿದರು.
ಹಾಫ್ ಮ್ಯಾರಥಾನ್ ಬೆಳಗ್ಗೆ 5 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಅಲ್ಲಿಂದ ನಾರಾಯಣ ಗುರು ಸರ್ಕಲ್ ಆಗಿ, ಚಿಲಿಂಬಿ, ದೇರೆಬೈಲ್, ಕರ್ಣಾಟಕ ಬ್ಯಾಂಕ್, ಭಾರತ್ ಮಾಲ್, ಬಿಜೈನಿಂದ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಮಲ್ಲಿಕಟ್ಟೆ ಭಾರತ್ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್, ಕ್ಲಾಕ್ ಟವರ್ ಆಗಿ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ.
ಮ್ಯಾರಥಾನ್‌ನಲ್ಲಿ ಭಾಗವಹಿಸುವವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಯಂ ಸೇವಕರ ಜತೆಗೆ, ಫಿಸಿಯೋಥೆರಪಿಸ್ಟ್‌ಗಳು, ಐದು ಆ್ಯಂಬುಲೆನ್ಸ್‌ಗಳನ್ನು ನಿಗದಿತ ಸ್ಥಗಳಲ್ಲಿ ವ್ಯವಸ್ಥೆಗೊಳಿಸಲಾಗಿರುತ್ತದೆ. ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ದಾರಿಯನ್ನು ತಪ್ಪಿಸಿಕೊಂಡು ಹೋಗದಂತೆ ಮೈಕ್ರೋ ಚಿಪ್‌ಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಪದಕ ಹಾಗೂ ಪ್ರಮಾಣ ಪತ್ರ, ಟೀ ಶರ್ಟ್‌ಗಳನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಈಗಾಗಲೇ 1200ರಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದು, ಸ್ಥಳದಲ್ಲೇ ನೋಂದಣಿಗೂ ಅವಕಾಶವಿರಲಿದೆ. ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 10 ಕಿ.ಮೀ. ಮ್ಯಾರಥಾನ್ 5.30ಕ್ಕೆ ಹಾಗೂ 5ಕಿ.ಮೀ. ನಡಿಗೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸಹಿತ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪದ್ಮರಾಜ್ ಹೇಳಿದರು.
ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ರವಿ, ಝೂಸ್ ಫಿಟ್ನೆಸ್ ಮಾಲೀಕ ರಾಜೇಶ್, ಖೇಲೋ ಇಂಡಿಯಾದ ರಕ್ಷಿತ್, ಜಯರಾಜ್, ಶ್ಯಾಂ ಸುಂದರ್, ಧನರಾಜ್ ಮೊದಲಾದವರಿದ್ದರು.