

ಮಂಗಳೂರು: ಗುಜ್ಜರಕೆರೆಯನ್ನು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದರೂ ಕೆರೆಯ ನೀರು ಬಳಕೆಗೆ ಯೋಗ್ಯವಾಗಿಲ್ಲ. ಕೆಲವು ದಿನಗಳ ಹಿಂದೆ ಕೆರೆಯ ನೀರನ್ನು ಪರೀಕ್ಷೆಗೊಳಪಡಿಸಿದಾಗ ಕಲುಷಿತಗೊಂಡಿರುವುದು ವರದಿಯಿಂದ ಮತ್ತೊಮ್ಮೆ ದೃಢಪಟ್ಟಿದೆ.
ಕೆರೆಯ ಸಂರಕ್ಷಣೆ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಉಳಿವಿಗೆ ಕಳೆದ ಎರಡು ದಶಕಗಳಿಂದ ಹೋರಾಡುತ್ತಿರುವ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ವತಿಯಿಂದ ಇತ್ತೀಚೆಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿತ್ತು. ಕುಡಿಯಲು ಯೋಗ್ಯವಲ್ಲ ಮತ್ತು ಹೆಚ್ಚು ಬ್ಯಾಕ್ಟಿರಿಯಾಗಳಿವೆ ಎಂದು ವರದಿ ಬಂದಿದೆ.
ಕೆರೆಯ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವ ಮುನ್ನವೇ ಈ ಸಂಬಂಧ ಪಟ್ಟಂತೆ ಗಮನ ಹರಿಸದೆ, ನೇರವಾಗಿ ದುಂದು ವೆಚ್ಚದ ಕಾಮಗಾರಿಗಳಿಗೆ ಆದ್ಯತೆ ನೀಡಿರುವುದು ಇಂದಿನ ಈ ಸ್ಥಿತಿಗೆ ಕಾರಣವಾಗಿದೆ. ಕೆರೆಯ ಅಭಿವೃದ್ಧಿ ಕಾರ್ಯಗಳು ನಡೆದ ಬಳಿಕ ಕೆರೆಯ ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ವರದಿಯಿಂದ ಹಲವು ಬಾರಿ ಸಾಬೀತಾಗಿದೆ.
ಗುಜ್ಜರಕೆರೆಯು ಯೋಗಿ ಗೋರಕ್ಷನಾಥರಿಂದ ನಿರ್ಮಿತವಾಗಿದ್ದು, ಸ್ಥಳೀಯ ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆಯೂ ಆಗಿದೆ. ಸ್ಥಳೀಯ ಪರಿಸರಕ್ಕೆ ಅಂತರ್ಜಲ ಸಂರಕ್ಷಣಾ ಆಗರವಾಗಿದ್ದು, ಈ ಕೆರೆಯ ಪರಿಸರವೂ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಕೆರೆಯ ಮಹತ್ವಕ್ಕೆ ಸಂಬಂಧಿತ ಅಭಿವೃದ್ಧಿ ಕಾರ್ಯಗಳನ್ನು ನಡೆಸದೇ ಮೇಲ್ನೋಟಕ್ಕೆ ನಯನ ಮನೋಹರವಾಗಿ ಕಾಣುವಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅನ್ಯ ರಾಜ್ಯದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೋಜು ಮಸ್ತಿಯ ತಾಣವಾಗಿಯೂ ಪರಿವರ್ತಿತವಾಗಿದ್ದು ಈ ಬಗ್ಗೆ ಲಗಾಮು ಹಾಕಬೇಕಿದೆ.
ಕೆರೆಯ ನೀರಿನಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಸೆದು ಜಲಚರಗಳ ಜೀವಕ್ಕೂ ಕುತ್ತು ತರುವ ಸ್ಥಿತಿ ತರಲಾಗಿದೆ. ಕೆರೆಯ ಸಂಪೂರ್ಣ ಪರಿಸರದ ರಕ್ಷಣೆಗೆ ಆದ್ಯತೆ ನೀಡಿಲ್ಲ. ರಾತ್ರಿಯ ವೇಳೆಯಲ್ಲಿ ಕೆರೆ ಪರಿಸರದಲ್ಲಿ ಅನೈತಿಕವಾಗಿ ವರ್ತಿಸುವವರ ಸಂಖ್ಯೆಯೂ ಮಿತಿ ಮೀರಿದ್ದು, ಕೆರೆಯ ಪರಿಸರದಲ್ಲಿ ರಾತ್ರಿ ವೇಳೆಯಲ್ಲಿ ಬಾಟಲಿ, ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಅಗತ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನಿಗದಿತ ಅವಧಿ ಬಳಿಕ ಕೆರೆ ಪರಿಸರಕ್ಕೆ ಪ್ರವೇಶ ನಿಷೇಧಿಸ ಬೇಕಿದೆ.
ಕೆರೆಯ ನೀರಿನಲ್ಲಿ ವಿಷಕಾರಿ ಅಂಶ ಪತ್ತೆಯಾಗಲು ಕಾರಣವೇನು? ಕೆರೆಗೆ ಒಳಚರಂಡಿ ನೀರು ಅಥವಾ ಇತರ ಮೂಲಗಳಿಂದ ಕೊಳಚೆ ನೀರು ಸೇರುತ್ತಿದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲು ಪಾಲಿಕೆ ಆಡಳಿತ ಅಸಮರ್ಥವಾಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಗುಜ್ಜರಕೆರೆ ಸಂರಕ್ಷಣಾ ವಿಚಾರವಾಗಿ ಹೋರಾಟ ಮಾಡುತ್ತಿರುವ ವೇದಿಕೆಯು ಈ ಬಗ್ಗೆ ಹಲವು ಬಾರಿ ಪ್ರಧಾನಿ ಕಚೇರಿ ಕದ ತಟ್ಟಿದ್ದು, ಅಲ್ಲಿಂದ ಪೂರಕ ಸ್ಪಂದನೆ ದೊರೆತರೂ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳದೇ ಸಂಪೂರ್ಣ ನಿರ್ಲಕ್ಷೃ ವಹಿಸಿರುವುದು ವಿಪರ‌್ಯಾಸ.
ನೇಮು ಕೊಟ್ಟಾರಿ
ಕೆರೆ ಸಂರಕ್ಷಣಾ ಸಮಿತಿ ಹೋರಾಟಗಾರ