

ಮಂಗಳೂರು : ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಪಿಎ್ಐ ಸೇರಿದಂತೆ ಸೇವಾ ಭದ್ರತೆ ನೀಡಬೇಕು ಎಂದು ಅತಿಥಿ ಉಪನ್ಯಾಸಕರ ದ.ಕ., ಕೊಡಗು, ಉಡುಪಿ ಸಂಘದ ಮಾಜಿ ಅಧ್ಯಕ್ಷ ಮಾಧವ ಕೆ.ಬಿ. ಒತ್ತಾಯಿಸಿದರು.
ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೆಶಕರಿಗೆ ಮನವಿ ಸಲ್ಲಿಸಿ ಬಳಿಕ ನಡೆದ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ 2005ರಿಂದ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಸುತ್ತಿದ್ದರೂ ಯಾವುದೇ ವೇತನ ಸೌಲಭ್ಯ, ಸೇವಾ ಭದ್ರತೆ ನೀಡದೆ ಸಂಕಷ್ಟದ ಪರಿಸ್ಥಿತಿ ಸೃಷ್ಟಿಸಿದೆ. ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರಿ ಕಾಲೇಜುಗಳ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು ಉಪನ್ಯಾಸಕರಲ್ಲಿ ಶೇ.70ರಷ್ಟು ಅತಿಥಿ ಉಪನ್ಯಾಸಕರಿದ್ದು, ಕಾಲೇಜುಗಳಲ್ಲಿ ಕೇವಲ ಬೋಧನಾ ಕಾರ್ಯ ಮಾತ್ರವಲ್ಲದೆ ಇನ್ನಿತರ ಬೋಧನೇತರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಉಪನ್ಯಾಸಕರ ಖಾಯಂ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ದ.ಕ. ಜಿಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಧೀರಜ್ ಕುಮಾರ್ ಮಾತನಾಡಿ, 10 ತಿಂಗಳ ವೇತನವು ಸಹಜ ನ್ಯಾಯದ ವಿರುದ್ಧ ಇರುವುದರಿಂದ 12 ತಿಂಗಳ ವೇತನವನ್ನು ಹಾಗೂ ಯುಜಿಸಿ ನಿಯಮದ ಮಿತಿಯಲ್ಲಿ ತಿಂಗಳ 10ನೇ ತಾರೀಕಿನ ಮೊದಲು ನೀಡಬೇಕು. ಸಿಬಂದಿ ಸೇವಾ ನಿಯಮದಂತೆ ಪಿಎ್, ಇಎಸ್‌ಐ, ಗ್ರಾಚ್ಯುಟಿ, ಸೌಲಭ್ಯ, ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ, ಸಿಬಂದಿ ಸೇವಾ ನಿಯಮದಂತೆ ರಜೆಯ ಸೌಲಭ್ಯ, ಸೇವಾ ಅವಧಿಯಲ್ಲಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರಿಂದ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ರಾಮೇಗೌಡ ಮನವಿ ಸ್ವೀಕರಿಸಿದರು. ಮಂಗಳೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಹರೀಶ್ ಆಚಾರ್ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ದ.ಕ. ಜಿಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಮಹಾಂತೇಶ್, ಉಪಾಧ್ಯಕ್ಷ ಡಾ.ವಿನೋದ ಸಹಿತ ಪ್ರಮುಖರು ಉಪಸ್ಥಿತರಿದ್ದರು.