ಸರ್ಕಾರದ ಆದೇಶ ಕಲೆ, ಕ್ರೀಡೆಗೆ ಹೊಡೆತ ಧಾರ್ಮಿಕ ಕಾರ್ಯಕ್ರಮ ಶಾಲೆಯಿಂದ ಬೀದಿಗೆ

mng--21 Aug DDPI ORDER
Published on

ಹರೀಶ್ ಮೋಟುಕಾನ, ಮಂಗಳೂರು


ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಆವರಣ/ಮೈದಾನ ಧಾರ್ಮಿಕ ಆಚರಣೆ ಸೇರಿದಂತೆ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನೀಡದಂತೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ನಡೆಯುತ್ತಿದ್ದ ಸ್ಥಳೀಯ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಳ್ಳುವ ಸ್ಥಿತಿ ಎದುರಾಗಿದೆ.


ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಮೈದಾನ ವಿರಳ. ಆ ಊರಿನ ಸಂಘ ಸಂಸ್ಥೆಗಳು ವಾರ್ಷಿಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಅಲ್ಲಿನ ಶಾಲಾ ಆವರಣ/ಮೈದಾನದಲ್ಲಿ ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುತ್ತಿವೆ. ಅಲ್ಲಿಗೆ ಊರಿನ ಎಲ್ಲಾ ಧರ್ಮದವರು ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸರ್ಕಾರದ ಆದೇಶದಿಂದ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಅನ್ಯಾಯವಾಗಿದೆ.
ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ 2013ರ ೆ.7ರಂದು ಮತ್ತು 2023 ಡಿ.1ರಂದು ರಾಜ್ಯದ ಎಲ್ಲ ಡಿಡಿಪಿಐ ಕಚೇರಿಗಳಿಗೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಕಟ್ಟಡ ಅಥವಾ ಶಾಲಾ ಮೈದಾನ ಅನುಮತಿ ನೀಡಬಾರದೆಂದು ಸುತ್ತೋಲೆ ಬಂದಿತ್ತು. ಈ ಆಧಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡಿಡಿಪಿಐ ವೆಂಕಟೇಶ್ ಪಟಗಾರ ಅವರು ಜು.16ರಂದು ಜ್ಞಾಪನಾ ಪತ್ರವನ್ನು ಎಲ್ಲ ಬಿಇಓಗಳಿಗೆ ರವಾನಿಸಿದ್ದಾರೆ.


ಜ್ಞಾಪನಾ ಪತ್ರದಲ್ಲಿ ಏನಿದೆ?: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ , ಶಾಲಾ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನು ನೀಡಬಾರದೆಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪಕ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂಘಟನೆಗಳು ಗೊಂದಲದಲ್ಲಿ: ರಾಜ್ಯಾದ್ಯಂತ ಹಬ್ಬ, ಉತ್ಸವಗಳು ಆರಂಭಗೊಂಡಿವೆ. ಆ.26ರಂದು ಶ್ರೀ ಕೃಷ್ಣಾಷ್ಟಮಿ ಮೊಸರು ಕುಡಿಕೆ ನಡೆಯಲಿದೆ. ಹಲವಾರು ವರ್ಷಗಳಿಂದ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಈ ವರ್ಷ ಕೆಲವು ಕಡೆ ಸ್ಥಳಾಂತರಗೊಂಡಿದೆ. ಇನ್ನು ಕೆಲವು ಕಡೆ ಸ್ಥಗಿತಗೊಂಡಿದೆ. ಶಾಲಾ ಆವರಣಗಳಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಆಚರಣೆ ಈ ಬಾರಿ ಎಲ್ಲಿ ನಡೆಸುವುದೆಂದು ಸಂಘಟಕರು ಗೊಂದಲದಲ್ಲಿದ್ದಾರೆ. ಇದರ ಪೂರ್ವಭಾವಿಯಾಗಿ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಗೆ ಕಾರ್ಯಕ್ರಮ ಆಯೋಜಕರು ಅರ್ಜಿ ಸಲ್ಲಿಸಿದಾಗ ಮುಖ್ಯಸ್ಥರು ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಂಘಟಕರು ಆಮಂತ್ರಣ ಪತ್ರಿಕೆ ಮುದ್ರಿಸಲಾಗದೆ ಗೊಂದಲದಲ್ಲಿದ್ದು, ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.


ಬಿಜೆಪಿ ಸರ್ಕಾರದಲ್ಲೇ ಆದೇಶ !: 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ‘ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು’. ಅದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಓ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ತೊಂದರೆ ಆಗುತ್ತಿರುವ ವಿಚಾರವನ್ನು ಸರ್ಕಾರ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ.

ರಾಜ್ಯ ಸರ್ಕಾರ 2013 ಮತ್ತು 2023ರ ಆಯ್ತುಕರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲ ಬಿಇಓಗಳಿಗೆ ಜ್ಞಾಪನಾ ಪತ್ರ ಕಳುಹಿಸಲಾಗಿದೆ. ಸರ್ಕಾರದ ಆದೇಶ, ನಿರ್ದೇಶನಗಳನ್ನು ಅಧಿಕಾರಿಗಳಾಗಿ ನಾವು ಅನುಷ್ಠಾನ ಮಾಡಬೇಕಾಗಿದೆ. ಉಳಿದಂತೆ ಈ ವಿಚಾರದಲ್ಲಿ ನಮಗೇನು ಗೊತ್ತಿಲ್ಲ.

ವೆಂಕಟೇಶ್ ಪಟಗಾರ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು, ದ.ಕ.

ಶಾಲಾ ಆವರಣಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಸಿಗಬೇಕು. ಯುವ ಪ್ರತಿಭೆಗಳು ತಮ್ಮ ಕಲೆ, ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುವುದರಿಂದ ಸೌಹಾರ್ದತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಸರ್ಕಾರದ ಆದೇಶದಿಂದ ಸಂಘ, ಸಂಸ್ಥೆಗಳು ತಮ್ಮ ವಾರ್ಷಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದೆ.
ತೇಜಸ್ವಿ ಕಡಪಳ
ಗೌರವಾಧ್ಯಕ್ಷ ಯುವಜನ ಸಂಯುಕ್ತ ಮಂಡಳಿ ಸುಳ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net