ಡಿ.16-17 ಕದ್ರಿ ಮೈದಾನದಲ್ಲಿ ಗೋವರ್ಧನ ಪೂಜೆ ಗೋವಿಗಾಗಿ ಮೇವು ಹೊರೆಕಾಣಿಕೆ ಕೇಂದ್ರ ಉದ್ಘಾಟನೆ

mng-dec2-vhp2
Published on

ಮಂಗಳೂರು: ಗೋವನಿತಾಶ್ರಯ ಟ್ರಸ್ಟ್ ಮಂಗಳೂರು, ಗೋವರ್ಧನ ಪೂಜಾ ಸಮಿತಿ ಆಶ್ರಯದಲ್ಲಿ ಡಿ.16 ಮತ್ತು 17ರಂದು ಕದ್ರಿ ಮೈದಾನದಲ್ಲಿ ನಡೆಯಲಿರುವ ಗೋವರ್ಧನ ಪೂಜೆಯ ಗೋವಿಗಾಗಿ ಮೇವು ಹೊರೆಕಾಣಿಕೆ ಅರ್ಪಣೆ ಕೇಂದ್ರದ ಉದ್ಘಾಟನೆ ಶರವು ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಶನಿವಾರ ನಡೆಯಿತು.


ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಕಟುಕರು ನಮ್ಮ ಗೋಮಾತೆಯನ್ನು ಮಾಂಸ ಮಾಡಲು ಸಾಗಾಟ ಮಾಡುತ್ತಿದ್ದಾರೆ. ಅದನ್ನು ತಡೆಯುವ ಪುಣ್ಯದ ಕೆಲಸವನ್ನು ವಿಹಿಂಪ, ಬಜರಂಗದಳದ ಕಾರ್ಯಕರ್ತರು ಮಾಡುತ್ತಿದ್ದಾರೆ. ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಎಷ್ಟಿದೆಯೋ ಅಷ್ಟೇ ಎರಡನೇ ತಾಯಿಯಾದ ಗೋವನ್ನು ರಕ್ಷಿಸುವ ಹೊಣೆಯು ಕೂಡ ನಮ್ಮ ಮೇಲಿದೆ. ನಮ್ಮಲ್ಲಿರುವ ಗೋವನಿತಾಶ್ರಯ ಕೇಂದ್ರಗಳು ನಿರ್ವಹಣೆ ಮಾಡಲು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿವೆ. ಹೀಗಾಗಿ ಗೋವಿಗಾಗಿ ಮೇವು ಹೆಸರಿನಲ್ಲಿ ಗೋವಿನ ಮೇವಿಗಾಗಿ ಜನರಿಂದ ವಸ್ತು ಮತ್ತು ಧನ ಸಂಗ್ರಹಣೆಯ ಕಾರ್ಯಕ್ಕೆ ಇಳಿದಿದ್ದೇವೆ. ಈ ಬಾರಿ ಒಂದು ಕೋಟಿ ರೂ. ನಿಧಿ ಸಂಗ್ರಹಣೆಯ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಜನರೆಲ್ಲರೂ ತುಂಬು ಹೃದಯದಿಂದ ಸಹಕಾರ ನೀಡಬೇಕು ಎಂದರು.


ಬಳಿಕ ಮಾತಾಡಿದ ಜಗದೀಶ್ ಶೇಣವ ಅವರು, ಗೋವನಿತಾಶ್ರಯ ಟ್ರಸ್ಟ್ ಮೂಲಕ ಪಜೀರಿನಲ್ಲಿ ಕಳೆದ ಎರಡು ದಶಕಗಳಿಂದ ಗೋವುಗಳನ್ನು ಸಾಕುವ ಪುಣ್ಯದ ಕೆಲಸವನ್ನು ಮಾಡುತ್ತಿವೆ. ಈಗ 385 ಗೋವುಗಳನ್ನು ಸಾಕಲಾಗುತ್ತಿದೆ. ಇಂದಿನ ದಿನಗಳಲ್ಲಿ ಸಂಬಳ ಕೊಟ್ಟರೂ ಕೆಲಸಕ್ಕೆ ಜನ ಸಿಗುವುದಿಲ್ಲ. ಹೀಗಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಇಲ್ಲಿನ ಮಾರ್ವಾಡಿಗಳು ರಾಜಸ್ಥಾನದಲ್ಲಿನ ಗೋಶಾಲೆಗಳಿಗೆ ಲಕ್ಷಗಟ್ಟಲೆ ದೇಣಿಗೆ ಕೊಡುತ್ತಾರೆ. ಆದರೆ ನಮಗೆ ಈ ಬಗ್ಗೆ ಯೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಅದ್ದೂರಿಯಾಗಿ ಮದುವೆ ಮತ್ತಿತರ ಕಾರ್ಯಕ್ರಮ ಮಾಡುವಾಗ ಅಲ್ಪಪ್ರಮಾಣದಲ್ಲಿ ಗೋವುಗಳ ರಕ್ಷಣೆಗೂ ಮನಸು ಮಾಡಿದಲ್ಲಿ ಖಂಡಿತಾ ಸಾಧ್ಯ ಎಂದರು.


ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಕೃಷ್ಣಮೂರ್ತಿ, ಸುಧಾಕರ್ ರಾವ್ ಪೇಜಾವರ, ಪೊಳಲಿ ಗಿರೀಶ ಕದ್ರಿ, ಮನೋಹರ್ ಸುವರ್ಣ,ಶಿವನಂದ ಮೆಂಡನ್, ಕರುಣಾಕರ, ಗೋಪಾಲ್ ಕುತ್ತಾರ್, ಭುಜಂಗ ಕುಲಾಲ್, ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ,ಶಿವ ಪ್ರಸಾದ್ ಕೊಣಾಜೆ,ಹರೀಶ್ ಶೇಟ್, ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net