ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ‘ಸಿರಿಚಾವಡಿ’ ತುಳುಕೂಟ ಉದ್ಘಾಟನೆ ಉತ್ಸಾಹಿ ಯುವಕರಿಂದ ತುಳು ಸಂಸ್ಕೃತಿ ಬೆಳೆಯಲಿ ಭಾಸ್ಕರ ರೈ ಕುಕ್ಕುವಳ್ಳಿ ಆಶಯ

mng--23 march siri chavadi
Published on

ಮಂಗಳೂರು: ಮರೆಯಾಗುತ್ತಿರುವ ತುಳು ಪರಿಸರ, ಜನಪದ ಸಂಸ್ಕೃತಿ, ಇತಿಹಾಸದ ಕುರುಹುಗಳು, ಆಚಾರ ವಿಚಾರ, ಕಟ್ಟು - ಕಟ್ಟಳೆಗಳು ಉಳಿಯಬೇಕಾದರೆ ಯುವಜನರು ಅದರಲ್ಲಿ ಆಸಕ್ತಿ ತೋರಬೇಕು ಎಂದು ತುಳು - ಕನ್ನಡ ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ನಗರದ ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ನೂತನವಾಗಿ ಆರಂಭವಾದ ‘ಸಿರಿ ಚಾವಡಿ’ ತುಳುಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಸಮೃದ್ಧವಾದ ಭಾಷೆ. ಅಗಾಧವಾದ ಜನಪದ ಸಾಹಿತ್ಯ, ಮೌಖಿಕ ಕಾವ್ಯ, ಸಂಧಿ - ಪಾಡ್ದನ, ಗಾದೆ - ಒಗಟುಗಳ ಕಣಜವಾಗಿರುವ ತುಳು ಭಾಷೆಯಲ್ಲಿ ಇತ್ತೀಚೆಗೆ ಸಾಕಷ್ಟು ಕೃತಿಗಳು ಹಾಗೂ ಸಂಶೋಧನಾತ್ಮಕ ಗ್ರಂಥಗಳು ಪ್ರಕಟವಾಗಿವೆ. ದೈವಾರಾಧನೆ, ನಾಗಾರಾಧನೆ ಮತ್ತು ಯಕ್ಷಾರಾಧನೆಗಳ ಮೂಲಕ ತೌಳವ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಇರುವ ತುಳುವರು ಲೋಕ ಮುಖಕ್ಕೆ ಪರಿಚಯಿಸಿದ್ದಾರೆ ಎಂದವರು ಹೇಳಿದರು.

ತುಳು ಬದುಕು ಸಮೃದ್ಧ:

ಜಾನಪದ ತಜ್ಞ ಕೆ.ಕೆ.ಪೇಜಾವರ ’ಗೇನದ ಮದಿಪು’ ಉಪನ್ಯಾಸ ನೀಡಿದರು. ಹಿರಿಯ ಜಾನಪದ ಕಲಾವಿದೆ ಲೀಲಾವತಿ ಕುಪ್ಪೆಪದವು ಅವರು ತುಳುನಾಡಿನ ಉಗಮದ ಸಂಧಿ ಹಾಗೂ ಓಬೇಲೇ ಪಾಡ್ದನವನ್ನು ಹಾಡಿ ರಂಜಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ವಸಂತ್ ಕಾರಂದೂರು ವಹಿಸಿದ್ದರು.

ಸಾಧಕರಿಗೆ ಸನ್ಮಾನ :

ಸಭೆಯಲ್ಲಿ ಹಿರಿಯ ಸಾಧಕರಾದ ಪಾಡ್ದನ ಕಲಾವಿದೆ ಲೀಲಾವತಿ ಮತ್ತು ಪ್ರಸಿದ್ಧ ನಾಟಿ ವೈದ್ಯ ಡಾ.ಮುರಳಿ ಕುಮಾರ್ ಚಿಲಿಂಬಿ ಅವರನ್ನು ಸನ್ಮಾನಿಸಲಾಯಿತು. ಓಟದ ಕೋಣಗಳ ಮಾಲಿಕ ಕೊಂಡಾಣ ಗುತ್ತಿನ ನಾಗೇಶ್ ರೈ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ ಅವರನ್ನು ಗೌರವಿಸಲಾಯಿತು. ಗ್ರಂಥ ಪಾಲಕಿ ದಿವ್ಯಾ ಎ. ಮತ್ತು ಎಂ.ಕಾಂ. ಉಪನ್ಯಾಸಕ ಲೆಫ್ಟಿನೆಂಟ್ ಪ್ರವೀಣ್ ಸನ್ಮಾನ ಪತ್ರ ವಾಚಿಸಿದರು.

ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಡಾ.ಬಿ.ಜಿ. ಸುವರ್ಣ, ಕಾಲೇಜು ಆಡಳಿತ ಮಂಡಳಿ ಸದಸ್ಯ ರಂಜನ್ ದಾಸ್, ವಿಜಯ್, ಜಯರಾಮ ಕಾರಂದೂರು, ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ನಿವೃತ್ತ ಪ್ರಾಧ್ಯಾಪಕ ಡಾ.ಉಮ್ಮಪ್ಪ ಪೂಜಾರಿ, ಬಿ. ಎಡ್. ಕಾಲೇಜು ಪ್ರಾಂಶುಪಾಲ ಉದಯಕುಮಾರ್ ಬಿ., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಎಂ.ಕಾಂ. ವಿಭಾಗದ ಸಂಯೋಜಕಿ ಸುಜಾತ, ಐಕ್ಯೂ ಎಸಿ ಸಂಯೋಜಕ ಯತೀನ್, ವಿದ್ಯಾರ್ಥಿ ಪ್ರತಿನಿಧಿಗಳಾದ ನವ್ಯಶ್ರೀ, ಸುಮಿತ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕಿ ಡಾ. ನಿಶಾ ಯುವರಾಜ್ ಮತ್ತು ಡಾ. ಮಂಜುಳಾ ಮಲ್ಯ ಅವರು ಬರೆದ ನೂತನ ಅರ್ಥಶಾಸ್ತ್ರ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

’ಸಿರಿ ಚಾವಡಿ’ ತುಳುಕೂಟದ ಸಂಯೋಜಕ ವಸಂತ್ ಸ್ವಾಗತಿಸಿದರು. ಪದವಿ ಕಾಲೇಜು ಪ್ರಾಂಶುಪಾಲ ಡಾ. ಜಯಪ್ರಕಾಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ ನಿಶಾ ಯುವರಾಜ್ ಮತ್ತು ಮಿಥುನ್ ಚಂದ್ರ ಆರ್. ಕೆ. ನಿರೂಪಿಸಿದರು. ಬಾಲಚಂದ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net