

ಮಂಗಳೂರು: ಜೆರೋಸಾ ಶಾಲೆಯಲ್ಲಿ ನಡೆದ ಹಿಂದೂ ಧರ್ಮ ಅವಹೇಳನ ಆರೋಪದ ಪ್ರಕರಣದ ಪ್ರತಿಭಟನೆ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೋಷಕರೊಬ್ಬರಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಮಾಡಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಅಲ್ಲದೆ ಅವರನ್ನು ಕ್ರೈಸ್ತ ಶಿಕ್ಷಣ ಸಂಸ್ಥೆಯೊಂದು ಶಿಕ್ಷಕಿ ಕೆಲಸದಿಂದ ವಜಾಗೊಳಿಸಿದೆ.
ಜೆರೊಸಾ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ವೃತ್ತಿಯಲ್ಲಿ ಶಿಕ್ಷಕಿಯೂ ಆಗಿರುವ ಪೋಷಕಿ ಕವಿತಾ ಎಂಬವರನ್ನು ತಾನು ಕೆಲಸ ಮಾಡುತ್ತಿದ್ದ ತೊಕ್ಕೊಟ್ಟಿನ ಹೋಲಿ ಏಂಜಲ್ ಪ್ರಾಥಮಿಕ ಶಾಲೆಯಿಂದ ಕಿತ್ತು ಹಾಕಲಾಗಿದೆ. ಕವಿತಾ ಅವರು ಮಂಗಳೂರಿನ ಜಪ್ಪಿನಮೊಗರು ನಿವಾಸಿಯಾಗಿದ್ದು ಆಕೆಯ ಪುತ್ರಿ ಸಂತ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ. ರಾಮನ ಬಗ್ಗೆ ಅವಹೇಳನ ಮಾಡಿದ ಶಿಕ್ಷಕಿ ಸಿಸ್ಟರ್ ಪ್ರಭಾ ಬಗ್ಗೆ ಆಕೆಯ ಪುತ್ರಿ ಮನೆಯಲ್ಲಿ ಹೇಳಿಕೊಂಡಿದ್ದಳು.
ಘಟನೆಯ ಬಳಿಕ ಫೆ.10 ರಂದು ಹಿಂದು ಸಂಘಟನೆಗಳ ಜೊತೆಗೆ ಡಿಡಿಪಿಐ ಕಚೇರಿಗೆ ಬಂದಿದ್ದ ಕವಿತಾ, ಹಿಂದು ಧರ್ಮ ಅವಹೇಳನ ಮಾಡಿರುವ ಶಿಕ್ಷಕಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ಕವಿತಾ ಅವರು ಮಾತನಾಡಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಅಷ್ಟಕ್ಕೇ ಶಿಕ್ಷಕಿ ಹುದ್ದೆಯಿಂದಲೇ ಕವಿತಾ ಅವರನ್ನು ಕ್ರೈಸ್ತ ಶಿಕ್ಷಣ ಸಂಸ್ಥೆ ಹೋಲಿ ಎಂಜಲ್ ಶಾಲೆಯ ಆಡಳಿತ ಮಂಡಳಿ ಕಿತ್ತು ಹಾಕಿದೆ. ಹೋಲಿ ಎಂಜಲ್ ಶಾಲೆಯಲ್ಲಿ ಕವಿತಾ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿದ್ದರು.
ಕವಿತಾ ಅವರ ಮೊಬೈಲ್‌ಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು ರಾತ್ರಿ ವೇಳೆ ವಾಟ್ಸಪ್ ನಂಬರಿಗೆ ಅಶ್ಲೀಲವಾಗಿ ಆಡಿಯೋ ಮೆಸೇಜ್ ಗಳನ್ನು ಹಾಕುತ್ತಿದ್ದಾರೆ. ಕತಾರ್ ದೇಶದಿಂದ ರಾತ್ರಿ ವೇಳೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ಸೋಮವಾರ ರಾತ್ರಿ ಈಕೆ ದೂರು ನೀಡಿದ್ದಾರೆ.