25 ಸಾವಿರ ರೂ. ದಂಡಕ್ಕೂ ಹೆದರದ ಮಂಗಳೂರು ಜನ ! ಎಚ್ಚರಿಕೆ ಬ್ಯಾನರ್ ಬುಡದಲ್ಲೇ ತ್ಯಾಜ್ಯ ರಾಶಿ

mng--5 April Thyajya 1
Published on
  • ಹರೀಶ್ ಮೋಟುಕಾನ

ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆದವರಿಗೆ 1500 ರೂ. ನಿಂದ 25 ಸಾವಿರ ರೂ. ತನಕ ದಂಡ ವಿಧಿಸಲಾಗುವುದು.
ಇದು ಮಹಾನಗರ ಪಾಲಿಕೆ ವತಿಯಿಂದ ನಗರದ ಹೃದಯ ಭಾಗವಾದ ಮಲ್ಲಿಕಟ್ಟೆ ಬಳಿ ಮುಖ್ಯ ರಸ್ತೆ ಬದಿ ಹಾಕಿದ ಬ್ಯಾನರ್. ಇದರ ಅಡಿಯಲ್ಲಿರುವ ತ್ಯಾಜ್ಯ ರಾಶಿಯನ್ನು ಗಮನಿಸಿದರೆ ಮಂಗಳೂರಿನಲ್ಲಿ ವಾಸಿಸುವ ಕೆಲವು ಜನರು ದಂಡ ವಿಧಿಸುವುದಕ್ಕೆ ಹೆದರಿದಂತಿಲ್ಲ.


ಮನೆ, ಹೋಟೆಲ್, ವಾಣಿಜ್ಯ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಪಾಲಿಕೆ ವಾಹನಕ್ಕೆ ವಿಲೇವಾರಿ ಮಾಡಬೇಕು. ಹಸಿ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ನೀಡುವಂತಿಲ್ಲ. ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಲ್ಲೆಂದರಲ್ಲಿ ರಸ್ತೆ ಬದಿ ಬಿಸಾಡುವಂತಿಲ್ಲ ಎನ್ನುವ ನಿಯಮವಿದ್ದರೂ ಶೈಕ್ಷಣಿಕವಾಗಿ ಮುಂದುವರಿದ, ಬುದ್ದಿವಂತ ಜನರ ನಗರ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರಿನ ಕೆಲವು ಜನರಿಗೆ ಇದು ಅನ್ವಯಿಸುವುದಿಲ್ಲ ಎನ್ನುವುದು ವಿಪರ್ಯಾಸ.

  • ಮಾಂಸ ತ್ಯಾಜ್ಯ: ಮಲ್ಲಿಕಟ್ಟೆ ಬಳಿ ಸುಮಾರು ಒಂದು ಲೋಡ್ ಆಗುವಷ್ಟು ತ್ಯಾಜ್ಯ ತಂದು ಹಾಕಿದ್ದರು. ಅದರಲ್ಲಿ ಕೋಳಿ, ಮೀನು ಮೊದಲಾದ ಮಾಂಸ ತ್ಯಾಜ್ಯವೂ ಸೇರಿದೆ. ಗಬ್ಬು ವಾಸನೆಯಿಂದ ಪರಿಸರದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇತ್ತು. ರಾತ್ರಿ ವೇಳೆ ವಾಹನಗಳಲ್ಲಿ ಬಂದು ಇಲ್ಲಿ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆದು ಹೋಗುತ್ತಿದ್ದಾರೆ. ಪಾಲಿಕೆ ವಾಹನದವರು ಒಂದು ದಿನ ಅಲ್ಲಿಂದ ವಿಲೇವಾರಿ ಮಾಡದಿದ್ದರೆ ಗಬ್ಬು ವಾಸನೆ ಬರಲಾರಂಭಿಸುತ್ತದೆ. ಅಲ್ಲಿ ಕಸ ಹಾಕಿದನ್ನು ಪಾಲಿಕೆಯವರು ಕೊಂಡು ಹೋಗುವುದರಿಂದ ಮತ್ತೆ ಮತ್ತೆ ತ್ಯಾಜ್ಯ ತಂದು ಹಾಕುತ್ತಲೇ ಇದ್ದಾರೆ. ಕಸ ಹಾಕದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಿದರಷ್ಟೇ ಇದಕ್ಕೆ ಕೊನೆಯಾಗಬಹುದು.
  • ನಿಗಾ ವಹಿಸುವಲ್ಲಿ ವಿಫಲ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತ್ಯಾಜ್ಯ ತುಂಬಿ ಅದನ್ನು ರಸ್ತೆ ಬದಿ ಹಾಕುವ ಸ್ಥಳಗಳನ್ನು ಬ್ಲಾೃಕ್ ಸ್ಪಾಟ್ ಎಂದು ಗುರುತಿಸಿ ಹಲವು ಕಡೆ ಎಚ್ಚರಿಕೆ ಬ್ಯಾನರ್ ಅಳವಡಿಸಿದೆ. ಆದರೆ ಈ ಬ್ಯಾನರ್‌ನಿಂದ ಯಾವುದೇ ಪ್ರಯೋಜವಾಗಿಲ್ಲ. ಕಾರಣ ಕಸ ಎಸೆದವರನ್ನು ಪತ್ತೆ ಮಾಡಿ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಬ್ಯಾನರ್ ಹಾಕಿದಲ್ಲಿ ಕೆಲವು ಕಡೆ ಸಿಸಿ ಕ್ಯಾಮರವನ್ನೇ ಅಳವಡಿಲ್ಲ. ಇದರಿಂದ ಕಸ ಎಸೆಯುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಪಾಲಿಕೆ ಅಧಿಕಾರಿಗಳು ನಿರಂತರ ನಿಗಾ ಇಟ್ಟು ತ್ಯಾಜ್ಯ ಎಸೆದವರಿಗೆ ಗರಿಷ್ಠ ದಂಡ ವಿಧಿಸಿ, ಎಚ್ಚರಿಕೆ ನೀಡಿದಾಗ ಸಹಜವಾಗಿ ಇಂತಹ ಚಟುವಟಿಕೆಗಳನ್ನು ತಡೆಗಟ್ಟಬಹುದಾಗಿದೆ. ಬೆರಳೆಣಿಕೆಯ ಮಂದಿಗೆ ಕನಿಷ್ಠ ದಂಡ ವಿಧಿಸಿರುವುದು ಬಿಟ್ಟರೆ ಯಾವುದೇ ಕಠಿಣ ಕ್ರಮ ಕೈಗೊಂಡಿರುವ ಪಾಲಿಕೆ ದಾಖಲೆ ಪಾಲಿಕೆಯಲ್ಲಿ ಇಲ್ಲ. ಮಾರ್ಗದ ಬದಿಯಲ್ಲಿ ಕಸ ಹಾಕುವುದನ್ನು ಕಂಡರೆ 9449007722 ಗೆ ಫೋಟೊ ಕಳುಹಿಸುವಂತೆ ಸೂಚಿಸಿದ್ದಾರೆ. ಫೋಟೊ ಕಳುಹಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸಿದ್ಧಪಡಿಸಿಟ್ಟ ಸಂದೇಶ ಬರುತ್ತದೆ. ಅಧಿಕಾರಿಗಳು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದರೆ ರಸ್ತೆ ಬದಿ ಕಸ ಎಸೆಯುವವರಿಗೆ ಭಯ ಹುಟ್ಟಿಸಬಹುದು.


ಸ್ಮಾರ್ಟ್‌ಸಿಟಿಯಾಗುತ್ತಿರುವ ಮಂಗಳೂರು ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದೆ ಸುಂದರ ಮಂಗಳೂರಿಗೆ ಕೊಡುಗೆ ನೀಡಬೇಕು. ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಸುಧೀರ್ ಶೆಟ್ಟಿ ಕಣ್ಣೂರು
ಮೇಯರ್


ಮಂಗಳೂರು ನಗರದ ಕೆಲವು ಕಡೆ ಶಿಕ್ಷಿತರು, ದೊಡ್ಡ ಹುದ್ದೆಗಳಲ್ಲಿರುವವರು ಐಷಾರಾಮಿ ಕಾರುಗಳಲ್ಲಿ ಬಂದು ತ್ಯಾಜ್ಯ ಎಸೆದು ಹೋಗುತ್ತಿರುವುದು ಬೇಸರದ ಸಂಗತಿ. ಮಕ್ಕಳಿಗೆ ಸ್ವಚ್ಛತೆಯ ಜಾಗೃತಿ ಎಳವೆಯಿಂದಲೇ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಸ್ವಚ್ಛ ಪರಿಸರ, ಹಸಿರು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.
ಕೃಷ್ಣಪ್ಪ ಪಿ.
ಪರಿಸರವಾದಿ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net