

ಮಂಗಳೂರು: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಎನ್ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜಾಲ್ ೈಸಲ್ ನಗರದ ನರ್ಸರಿ ಬಳಿ ಕಂಕನಾಡಿ ನಗರ ಠಾಣೆಯ ಹಳೇ ಆರೋಪಿಯಾಗಿರುವ ಮೊಹಮ್ಮದ್ ಅಫ್ರೀದಿ (27) ಎಂಬಾತ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.
ಸಿಸಿಬಿ ಘಟಕದ ಎಎಸ್ಐ ಶ್ರೀರಾಮ್ ಅವರು ಸಿಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದ ಎದುರಿನ ರಸ್ತೆ ಬದಿಯಲ್ಲಿ ಸಂಜಯ ನಗರದ ನಿವಾಸಿ ಧನರಾಜ್ ಪೂಜಾರಿ (36) ಎಂಬಾತ ಮಾದಕ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಿಳಿಸಿದ್ದಾನೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.
ಮರೋಳಿ ರಾಮನಗರಕ್ಕೆ ಸಾಗುವ ರಸ್ತೆಯಲ್ಲಿ ಹೈಜಮ್ (20) ಎಂಬಾತ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.