

ಮಂಗಳೂರು: ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುವಾರ ಕೊನೆಯ ಹಂತದ ತಯಾರಿ ನಡೆದಿದೆ. ಅನೇಕ ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ನಗರದ ವಿವಿಧ ಮನೆಗಳಿಂದಲೂ ಗಣೇಶ ವಿಗ್ರಹಕ್ಕೆ ಬಂದ ಬೇಡಿಕೆಯಂತೆ ವಿಗ್ರಹ ತಯಾರಿ ನಡೆದಿದೆ. ಶುಕ್ರವಾರ ಬಹುತೇಕ ವಿಗ್ರಹಗಳನ್ನು ಕೊಂಡೊಯ್ಯುತ್ತಾರೆ.
ಪಿಓಪಿ ಗಣಪನಿಗೆ ಬೇಡಿಕೆ ಕಡಿಮೆಯಾಗಿದ್ದು, ನಿಸರ್ಗಸ್ನೇಹಿ ಗಣಪನ ಆರಾಧನೆಗೆ ಮಂಗಳೂರಿನ ಜನತೆ ಮುಂದಾಗಿದ್ದಾರೆ. ಈಗಾಗಲೇ ವಿಗ್ರಹ ತಯಾರಿಕೆ ಕಾರ್ಯಗಳೂ ಮುಗಿದಿದ್ದು, ಶಾಸಪ್ರಕಾರವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಕೊಂಡೊಯ್ಯುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಷ್ಠಾಪನ ಕಾರ್ಯಕ್ಕೂ ಮುನ್ನ ನಡೆಯಬೇಕಾದ ಧಾರ್ಮಿಕ ವಿಧಿವಿಧಾನಗಳಿಗೂ ಜನ ಶ್ರದ್ಧಾ ಭಕ್ತಿಯೊಂದಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಗಣೇಶ ಹಬ್ಬಕ್ಕೆ ಸಂಬಂಧಪಟ್ಟಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಕೆಲವೊಂದು ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಹಬ್ಬದ ಆಚರಣೆಯಿಂದ ಉಂಟಾಗುವ ಮಾಲಿನ್ಯದಿಂದ ನೈಸರ್ಗಿಕ ಜಲ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗಣೇಶ ಚತುರ್ಥಿ ಹಬ್ಬದಂದು ಪ್ಲಾಸ್ಟರ್ ಆ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಕೆರೆ, ಬಾವಿ ಕಟ್ಟೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟರ್ ಆ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ವ್ಯಾಪಾರ ಪರವಾನಗಿ ನೀಡದಿರಲು ಮತ್ತು ಪರವಾನಗಿ ಪಡೆದೆ ಅನಧಿಕೃತವಾಗಿ ತಯಾರಿ, ಮಾರಾಟ ಮಾಡುವ ವ್ಯಕ್ತಿ, ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತತ್‌ಕ್ಷಣ ಜರಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆವೆ ಮಣ್ಣು ಬಲು ದುಬಾರಿ !
ಗಣಪತಿ ವಿಗ್ರಹ ತಯಾರಿಕೆಗೆ ಆವೆ ಮಣ್ಣು ಬಳಕೆ ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗದ್ದೆ ಕಡಿಮೆಯಾಗಿದ್ದು, ಆವೆ ಮಣ್ಣು ಖರೀದಿಗೆ ದರ ಹೆಚ್ಚಾಗಿದೆ.
ಮಂಗಳೂರಿನ ಗಣಪತಿಗೆ ಅಮೆರಿಕದಲ್ಲಿ ಪೂಜೆ
ದೇಶಾದ್ಯಂತ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುವುದು ಸಾಮಾನ್ಯ. ಆದರೆ ಅಮೆರಿಕಾದಲ್ಲಿಯೂ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅಲ್ಲಿ ಪೂಜಿಸುವ ಗಣಪತಿಯನ್ನು ಮಂಗಳೂರಿನಲ್ಲಿ ತಯಾರಿಸಲಾಗುತ್ತಿದೆ ಎಂಬುವುದು ವಿಶೇಷ. ಮಂಗಳೂರಿನ ಮಣ್ಣಗುಡ್ಡೆ ಬಳಿ ತಯಾರಾದ ಗಣಪತಿ ವಿಗ್ರಹವನ್ನು ಅಮೆರಿಕದಲ್ಲಿ ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ದ.ಕ. ಜಿಲ್ಲೆಯ ಮೂಲ್ಕಿ ಮೂಲದ ಪಾಂಡುರಂಗ ಶರ್ಮ ಅವರು ಅಮೆರಿಕಾದ ದೇವಸ್ಥಾನದಲ್ಲಿ ಕಳೆದ ಎರಡು ದಶಕಗಳಿಂದ ಗಣೇಶ ಮೂರ್ತಿ ಪೂಜಿಸುತ್ತಿದ್ದಾರೆ. ಗಣೇಶನ ವಿಗ್ರಹವನ್ನು ಈಗಾಗಲೇ ವಿಮಾನದ ಮೂಲಕ ಅಮೇರಿಕಕ್ಕೆ ಕೊಂಡೊಯ್ಯಲಾಗಿದೆ.
ಗಣಪತಿ ಹಬ್ಬಕ್ಕೆ ವಿಗ್ರಹ ತಯಾರಿಯಾಗಿ ಬಣ್ಣದ ಕೆಲಸ ಕೊನೆಯ ಹಂತದಲ್ಲಿದೆ. ಸಾಮಾನ್ಯವಾಗಿ ಅಮಾವಾಸ್ಯೆ ಕಳೆದು ವಿಗ್ರಹ ಕೊಂಡೊಯ್ಗಯಲು ಆರಂಭ ಆಗುತ್ತದೆ. ಆವೆ ಮಣ್ಣಿಗೂ ದರ ಏರಿಕೆ ಕಂಡಿದ್ದು, ಕೆಲ ವರ್ಷಗಳ ಹಿಂದೆ ಒಂದು ಹಂಚಿಗೆ 8 ರೂ. ಇತ್ತು. ಸದ್ಯ 25 ರೂ.ಗೆ ಏರಿಕೆ ಕಂಡಿದೆ.