ನ.10ರಂದು ಮೂಡುಬಿದಿರೆಯಲ್ಲಿ ‘ಗದ್ದಿಗೆ’ ಸಮಾವೇಶ -ಸಿದ್ಧತೆ ಅಂತಿಮ ಹಂತದಲ್ಲಿ - 20 ಸಾವಿರ ಜನರ ನಿರೀಕ್ಷೆ

marati
Published on

ಮಂಗಳೂರು: ಮರಾಟಿ ಸಮಾಜದ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನ.10ರಂದು ಮೂಡುಬಿದಿರೆ ಆಳ್ವಾಸ್ ಕಾಲೇಜು ಕ್ಯಾಂಪಸ್‌ನ ನುಡಿಸಿರಿ ಸಭಾಂಗಣದಲ್ಲಿ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ-2024ನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಹೇಳಿದರು.

ನಗರದಲ್ಲಿ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮರಾಟಿ ಸಮುದಾಯ 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ. ಈ ಸಮಾವೇಶದಲ್ಲಿ ದ.ಕ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡಿನಿಂದ ಸುಮಾರು 15 ರಿಂದ 20 ಸಾವಿರ ಜನ ಭಾಗವಹಿಸಲಿದ್ದಾರೆ. ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. 22 ವರ್ಷದ ಬಳಿಕ ಸಮಾವೇಶ ನಡೆಯುತ್ತಿದ್ದು, ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧ್ಯೇಯವನ್ನು ಹೊಂದಿದೆ ಎಂದರು.

ಸಮಾವೇಶದಲ್ಲಿ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಮೂರು ಗೋಷ್ಠಿಗಳು, ಉಪನ್ಯಾಸ ಹಾಗೂ ಸನ್ಮಾನ ಮತ್ತು ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಗದ್ದಿಗೆ ಸ್ಮರಣ ಸಂಚಿಕೆಯನ್ನು ಡಾ.ಎಂ. ಮೋಹನ ಆಳ್ವರವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಮಾಜದ ಶ್ರೇಷ್ಠ ಸಾಧನೆ ಮಾಡಿರುವ ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕರನ್ನು ಸನ್ಮಾನಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಗುವುದು ಎಂದರು.

ಸಮಿತಿ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ಮಾತನಾಡಿ, ಸಮಾವೇಶಕ್ಕೆ 10.30ಕ್ಕೆ ಮೊದಲು ಆಗಮಿಸಿದವರನ್ನು ಸಮಿತಿ ವತಿಯಿಂದ ಶಾಲು ಹಾಕಿ ವಿಶೇಷವಾಗಿ ಸ್ವಾಗತಿಸಲಾಗುವುದು. ಸಮಾವೇಶದ ಯಶಸ್ಸಿಗೆ 33 ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಗಿದೆ. ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಂತಿಮ ಹಂತದಲ್ಲಿದೆ. ಗ್ರಾಮಾಂತರ ಪ್ರದೇಶಗಳಿಂದ 150ರಷ್ಟು ಬಸ್‌ಗಳಲ್ಲಿ ಸಮಾವೇಶಕ್ಕೆ ಬರುವ ನಿರೀಕ್ಷೆ ಹೊಂದಲಾಗಿದೆ. ಎಲ್ಲಾ ಸಮಾಜ ಬಾಂಧವರನ್ನು ವೈಯುಕ್ತಿಕವಾಗಿ ಆಮಂತ್ರಿಸಲು ಸಾಧ್ಯವಾಗಿಲ್ಲ. ಆಮಂತ್ರಣ ಸಿಗದವರು ಇದನ್ನೇ ವೈಯುಕ್ತಿಕ ಆಮಂತ್ರಣ ಪತ್ರವೆಂದು ಪರಿಗಣಿಸಿ, ಸಮಾವೇಶಕ್ಕೆ ಆಗಮಿಸಬೇಕು ಎಂದವರು ಮನವಿ ಮಾಡಿದ್ದಾರೆ.

ಸಮಿತಿ ಜತೆ ಕಾರ್ಯದರ್ಶಿ ಶೇಷಪ್ಪ ನಾಯ್ಕ , ಪದಾಧಿಕಾರಿಗಳಾದ ರತ್ನಾವತಿ, ಬಾಲಚಂದ್ರ ನಾಯ್ಕ ಉಪಸ್ಥಿತರಿದ್ದರು.

9ರಂದು ಉದ್ಯೋಗ ಮೇಳ

ನ.9ರಂದು ಆಳ್ವಾಸ್ ಆವರಣದಲ್ಲಿ ಸಮಾಜ ಬಾಂಧವರಿಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. 60ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿದ್ದು, ಈಗಾಗಲೇ 1800 ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪದವೀಧರ ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಬರುವ ಸಮಾಜ ಬಾಂಧವರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕ್ಯಾಂಪಸ್‌ನಲ್ಲಿ ಮಾಡಲಾಗಿದೆ ಎಂದು ಶ್ರೀಧರ್ ನಾಯ್ಕ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net