ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಕರೆ -- ಆರೋಪಿಯನ್ನು ಬಂಧಿಸಿದ ಪೋಲೀಸರು

mng--22 Dec Dhananjaya reddy
Published on

ಮಂಗಳೂರು: ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಪುರುಷೋತ್ತಮ ಅವರಿಗೆ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಕದಿರಿ ತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಮದ ಧನಂಜಯ ರೆಡ್ಡಿ ತೋಟಾ ಬಂಧಿತ ಆರೋಪಿ.

ಏ.4ರಂದು ಈತ ಕರೆ ಮಾಡಿದ್ದು, ತಾನು ಲೋಕಾಯುಕ್ತದಿಂದ ಮಾತನಾಡುತ್ತಿದ್ದು, ನಿಮ್ಮ ಮೇಲೆ ಆರೋಪ ಬಂದಿದೆ. ನಮ್ಮ ಟೆಕ್ನಿಕಲ್ ಅಧಿಕಾರಿಗಳು ನಿಮ್ಮ ಕಚೇರಿಗೆ ಬರುವ ಮೊದಲು ಅದನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ ಹಣ ನೀಡುವಂತೆ ತಿಳಿಸಿದ್ದ. ಆತನ ಮೊಬೈಲ್ ನಂಬರನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಡಿ.ಪ್ರಭಾಕರ ಲೋಕಾಯುಕ್ತ ಪಿ.ಐ. ಎಂದು ತೋರಿಸಿದೆ. ಈ ಬಗ್ಗೆ ಪುರುಷೋತ್ತಮರು ಲೋಕಾಯುಕ್ತ ಅಧಿಕಾರಿಗಳಲ್ಲಿ ಫೋನ್ ಮೂಲಕ ವಿಷಯ ತಿಳಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ/ಸಿಬ್ಬಂದಿ ಇಲ್ಲ ಎಂದು ತಿಳಿದು ಬಂದಿತ್ತು. ಪುರುಷೋತ್ತಮರ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷರಾದ ಲಿಲ್ಲಿ ನಾಯರ್ ಮತ್ತು ಕೃಷ್ಣ ಆರ್. ಅವರಿಗೂ ಇದೇ ರೀತಿಯ ಬೆದರಿಕೆ ಬಂದಿತ್ತು. ಈ ಬಗ್ಗೆ ಪುರುಷೋತ್ತಮರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆರೋಪಿ ಇದೇರೀತಿಯ ಕೃತ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಹೈದರಾಬಾದ್ ನಗರದ ಶಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾಡಿದ್ದ.

ಉಳ್ಳಾಲ ಪಿಎಸ್‌ಐ ಸಂತೋಷ್ ಕುಮಾರ್ ಹಾಗೂ ಅಪರಾಧ ವಿಭಾಗದ ಎಚ್.ಸಿ. ರಂಜಿತ್ ಕುಮಾರ್, ಆನಂದ ಬಾಡಗಿ, ಮಂಜುನಾಥ ಅವರು ಆರೋಪಿಯನ್ನು ತಾಂತ್ರಿಕ ಸಹಾಯದಿಂದ ಪತ್ತೆ ಮಾಡಿ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net