

ಮಂಗಳೂರು: ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನಾಲ್ಕು ಉಪಯಾಜಕರುಗಳಿಗೆ ಶುಕ್ರವಾರ ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಯಾಜಕ ದೀಕ್ಷೆ ನೀಡಿದರು.
ವಂ. ಮ್ಯಾಕ್ಸಿಮ್ ಮಾರ್ಟಿನ್ ಡಿಸೋಜ, ವಂ. ಜೋಸ್ವಿನ್ ಪಿರೇರಾ, ವಂ. ಕಿರಣ್ ಲೀಮಾ, ಹಾಗೂ ವಂ. ವಿಲ್ಸನ್ ಸಲ್ಡಾನ್ಹಾ ಗುರುದೀಕ್ಷೆ ಪಡೆದ ಉಪಯಾಜಕರು. ತಮ್ಮ ಪ್ರಭೊಧನೆಯಲ್ಲಿ ಓರ್ವ ಯಾಜಕನು ಕ್ರಿಸ್ತನ ರಾಯಭಾರಿಗಾಗಿ ತಮ್ಮ ಜೀವನದಲ್ಲಿ ಕ್ರಿಸ್ತನು ಸಾರಿದ ಮೌಲ್ಯಗಳನ್ನು ಪ್ರತಿಬಿಂಬಿಸಲು ಕರೆ ನೀಡಿದರು. ದೇವರಿಂದ ಅಭಿಷಿಕ್ತನಾದವನ ಬಲವೇ ದೇವರ ಸಾನಿಧ್ಯ. ನಾವು ಕ್ರಿಸ್ತನಂತಾಗಲು ಕ್ರಿಸ್ತನ ಜೀವನ ಮತ್ತು ಕಾಯಕವನ್ನು ಅನುಸರಿಸುವ ಯಾಜಕರಾಗಬೇಕು ಎಂದರು.
ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂ. ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂ. ಸ್ವಾಮಿ ಅನಿಲ್ ಡಿಮೆಲ್ಲೊ ಹಾಗೂ ನೂರಕ್ಕೂ ಹೆಚ್ಚು ಗುರುಗಳು ಹಾಗೂ ಕನ್ಯಾಸ್ತ್ರೀಯರು ಹಾಜರಿದ್ದರು. ವಂ. ಸ್ವಾಮಿ ವಿಶ್ವಾಸ್ ಮಿಸ್ಕಿತ್‌ರವರು ಬಲಿಪೂಜೆಯ ನಿರ್ವಹಿಸಿದರು. ವಂ. ಸ್ವಾಮಿ ಲೆಸ್ಟನ್ ಲೋಬೊ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದರು.