

ಮಂಗಳೂರು: ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವ ಮತ್ತು ಇಲ್ಲಿಂದ ತೆರಳುವ ವ್ಯವಸ್ಥೆಯಲ್ಲಿ ಶನಿವಾರ ವ್ಯತ್ಯಯ ಉಂಟಾಯಿತು.
ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಮುಂಬೈ- ಮಂಗಳೂರು ಇಂಡಿಗೋ ವಿಮಾನ (6ಇ334) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿತು.
ಬೆಳಗ್ಗೆ ಸುಮಾರು 11ಕ್ಕೆ ಇಳಿಯಬೇಕಾಗಿದ್ದ ಬೆಂಗಳೂರು- ಮಂಗಳೂರು ಇಂಡಿಗೋ ವಿಮಾನ (6ಇ496) ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಇವೆರಡು ವಿಮಾನಗಳು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಾಸಾದವು ಮತ್ತು ಇಲ್ಲಿಂದ ಪ್ರಯಾಣ ಮುಂದುವರಿಸಿತು.
ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ವಹಿಸಲ್ಪಡುವ ಇತರ ವಿಮಾನಗಳು ಕೂಡ ಶನಿವಾರ ತನ್ನ ವೇಳಾಪಟ್ಟಿಯಲ್ಲಿರುವ ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಿದವು.