ಮಂಗಳೂರು ಮೀನುಗಾರಿಕಾ ದಕ್ಕೆಯಲ್ಲಿ ಇಬ್ಬರು ಬಾಲಕಾರ್ಮಿಕರ ರಕ್ಷಣೆ

child labour
Published on

ಮಂಗಳೂರು : ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಮೀನುಗಾರಿಕಾ ಬಂದರ್‌ನಲ್ಲಿ ಗುರುವಾರ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ನಡೆಸಿದ ದಿಢೀರ್ ತಪಾಸಣೆ ಸಂದರ್ಭದಲ್ಲಿ ಇಬ್ಬರು ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಇವರನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.


ದಾಳಿಯಲ್ಲಿ ಕಾರ್ಮಿಕ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಪೊಲೀಸ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಹೆಲ್ಪ್ ಲೈನ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು ಆಗಿದ್ದು, 14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಅಲ್ಲದ ಸಂಸ್ಥೆಯಲ್ಲಿ ದುಡಿಯುದನ್ನು ನಿಯಂತ್ರಿಸಲಾಗಿದ್ದು, ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ 50,000ರೂ. ತನಕ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್‌ನ್ನು ದಾಖಲಿಸಲಾಗುತ್ತದೆ.


ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಚೈಲ್ಡ್‌ಲೈನ್:1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343, 2433132, 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131ಗೆ ಸಂಪರ್ಕಿಸುವಂತೆ ಮಾಡುವಂತೆ ಕಾರ್ಮಿಕರ ಇಲಾಖೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net