

ಮಂಗಳೂರು: ನಗರದ ಕಂಕನಾಡಿ ಬಳಿಯಲ್ಲಿ ಭಾನುವಾರ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಆರೋಪಿಯನ್ನು ನಗರ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಆಬುಪಡ್ಪು ನಿವಾಸಿ ಪ್ರಶ್ವಿತ್ (25) ಬಂಧಿತ ಆರೋಪಿ. ಈತ 500, 200 ಮತ್ತು 100 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂಗಳ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದ. ಆರೋಪಿತನಿಂದ 500 ರೂ ಮುಖಬೆಲೆಯ 3 ನೋಟುಗಳು, 200 ರೂ ಮುಖಬೆಲೆಯ 2 ನೋಟುಗಳು ಹಾಗೂ 100 ರೂ ಮುಖಬೆಲೆಯ 3 ನೋಟುಗಳು ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.
8 ಖೋಟಾ ನೋಟುಗಳು, 10 ಸಾವಿರ ರೂ. ಮೌಲ್ಯದ ಮೊಬೈಲ್,4250 ರೂ. ಮೌಲ್ಯದ 35 ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.