ನಕಲಿ ನೋಟು ಪ್ರಿಂಟ್ ಆರೋಪ ಸಾಬೀತು ಅಪರಾಧಿಗೆ 5 ವರ್ಷ ಕಠಿಣ ಶಿಕೆ, 20 ಸಾವಿರ ರೂ. ದಂಡ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ನಕಲಿ ನೋಟುಗಳನ್ನು ಚಲಾವಣೆ ಮಾಡಿದ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕು ಇರಾ ಗ್ರಾಮದ ದರ್ಬೆ ಹೌಸ್ ಅಬ್ಬಾಸ್ (57) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ಹಿನ್ನೆಲೆ: 2020 ಅ.31ರಂದು ಅಪರಾಧಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸ್ಟೇಟ್‌ಬ್ಯಾಂಕ್ ಬಳಿಯ ಶ್ರೀ ಕಟೀಲ್ ಎಂಟರ್ ಪ್ರೈಸಸ್ ಎಂಬ ಕಚೇರಿಗೆ ಹೋಗಿ ಮಕ್ಕಳ ಪ್ರಾಜೆಕ್ಟ್‌ಗೆಂದು ಸುಳ್ಳು ಹೇಳಿ 100 ರೂ. ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಕಲರ್ ಪ್ರಿಂಟ್ ಮಾಡಿಸಿದ್ದ. ಈ ನೋಟುಗಳನ್ನು ಮೋರ್ಗನ್ಸ್‌ಗೇಟ್‌ನಲ್ಲಿರುವ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಚಲಾವಣೆಗೆ ಯತ್ನಿಸಿದ್ದ. ಈ ಸಂದರ್ಭ ಸಿಸಿಬಿ ಪಿಎಸ್‌ಐ ಪ್ರದೀಪ್ ಟಿ.ಆರ್. ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಬ್ಬಾಸ್‌ನನ್ನು ಬಂಧಿಸಿದ್ದರು. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪಿಎಸ್‌ಐ ಸುರೇಶ್ ಕುಮಾರ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಅಬ್ಬಾಸ್ ವಶದಿಂದ 11 ನಕಲಿ ನೋಟುಗಳನ್ನು ಹಾಗೂ 2 ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣವು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 13 ಸಾಕ್ಷಿದಾರರನ್ನು ವಿಚಾರಣೆ ನಡೆಸಿ, 14 ದಾಖಲೆಗಳನ್ನು ಗುರುತಿಸಲಾಗಿತ್ತು. ಸಾಕ್ಷೃ ದಾಖಲೆಗಳು, ಪೂರಕ ಸಾಕ್ಷೃ ಹಾಗೂ ವಾದ ಪ್ರತಿವಾದ ಆಲಿಸಿ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಧಿಶರಾದ ಸುನಿತಾ ಎಸ್.ಜಿ. ತೀರ್ಪು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ, ಬಿ.ಪ್ರಕಾಶ್ಚಂದ್ರ ಶೆಟ್ಟಿ ಸರ್ಕಾರದ ಪರವಾಗಿ ವಾದ ಮಾಡಿದ್ದು, ಬಳಿಕ ಹರಿಶ್ಚಂದ್ರ ಉದಿಯಾವರ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net