

ಮಂಗಳೂರು: ನಗರದ ಬಂದರ್‌ನಲ್ಲಿ ವಿತರಣಾ ವ್ಯವಹಾರ ಹೊಂದಿರುವ ಪ್ರಾಂಕ್ ರೋಡ್ರಿಗಸ್ ಅವರಿಗೆ ಜೀವನ್ ಕೋಟ್ಯಾನ್ ಎಂಬಾತ 3.62 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರಾಂಕ್ ರೋಡ್ರಿಗಸ್ ಅವರಿಗೆ ಸೇರಿದ ಗೂಡ್ಸ್ ಟೆಂಪೊದಲ್ಲಿ ಆರೋಪಿ ಜೀವನ್ ಕೋಟ್ಯಾನ್ ಚಾಲಕನಾಗಿದ್ದ. 2014ರ ಆ.1ರಿಂದ 2022ರ ಜು.30ರವರೆಗೆ ಸರಕು ವಿತರಣಾ ಮಾರಾಟ ನಿರ್ವಹಿಸುತ್ತಿದ್ದ. ನಂಬಿಕೆಯ ಲಾಭ ಪಡೆದುಕೊಂಡು ಮಾರಾಟ ವಿಭಾಗದಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 3.47 ಲಕ್ಷ ರೂ. ವಂಚಿಸಿದ್ದಾನೆ. ಅಲ್ಲದೆ 15,000 ರೂ. ವೈಯಕ್ತಿಕ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ತಪ್ಪನ್ನು ಒಪ್ಪಿಕೊಂಡು ಒಂದು ವರ್ಷದೊಳಗೆ ಸಂಪೂರ್ಣ ಮೊತ್ತ ನೀಡುವುದಾಗಿ ತಿಳಿಸಿದ್ದ. ಜೂ.30ರಂದು ಯಾವುದೇ ಮಾಹಿತಿ ಅಥವಾ ಸೂಚನೆ ನೀಡದೆ ಕೆಲಸ ಬಿಟ್ಟು ಹೋಗಿ ವಂಚಿಸಿದ್ದಾನೆ ಎಂದು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.