ಕರಾವಳಿಯಲ್ಲಿ ಬೀಡಿ ಬಡತನ, ಶಿಕ್ಷಣಕ್ಕೆ ಶಕ್ತಿ ತುಂಬಿದೆ ಕೃತಿ ಬಿಡುಗಡೆಗೊಳಿಸಿ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಅಭಿಮತ

mng-feb6-Book release
Published on

ಮಂಗಳೂರು: ಕರಾವಳಿಯಲ್ಲಿ ಬೀಡಿ ಬಡತನ ಮತ್ತು ಶಿಕ್ಷಣಕ್ಕೆ ಶಕ್ತಿ ಸಿಕ್ಕಿದೆ. ಕಾರ್ಮಿಕರು ಹಾಗೂ ಸಮಾಜಕ್ಕೆ ಬೆಳಕಾದ ಹಾಗೂ ಈಗಲೂ ಬೆಳಕಾಗಿರುವ ಗಣೇಶ್ ಬೀಡಿ ಸಂಸ್ಥೆಯ ಕಾರ್ಯ ಅದ್ವಿತೀಯ ಎಂದು ವಿಮರ್ಶಕ, ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.

ರಮಾಬಾಯಿ ಚಾರಿಟಬಲ್ ೌಂಡೇಶನ್ ಮೈಸೂರು ಆಶ್ರಯದಲ್ಲಿ ಗುರುವಾರ ‘ಎರಡು ನೆರೆಗಳ ನಡುವೆ-ಮಂಗಳೂರು ಗಣೇಶ ಬೀಡಿ ಕಥನ’ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯಗೈದರು.

ಗಣೇಶ್ ಬೀಡಿ ಹುಟ್ಟಿ ಬೆಳೆದದ್ದು ಅಸಾಧಾರಣ ಕಥೆ. ಇದರ ನಾಲ್ಕು ತಲೆಮಾರಿನ ಕಥಾನಕವನ್ನು ಪುಸ್ತಕದಲ್ಲಿ ಅತ್ಯುತ್ತಮವಾಗಿ ಬಿಂಬಿಸಲಾಗಿದೆ. ಪ್ರತೀ ಪುಟವು ಸಾರ್ಥಕ ಸ್ವರೂಪದಲ್ಲಿದೆ. ಬೀಡಿಗೆ ಬೇಕಾದ ಯಾವ ಕಚ್ಚಾವಸ್ತು ಇಲ್ಲದಿದ್ದರೂ ಬೀಡಿ ಉದ್ಯಮ ಕರಾವಳಿಯಲ್ಲಿ ಬೆಳೆದದ್ದು ಮತ್ತೊಂದು ಅಸಾಧಾರಣ ಸಂಗತಿ. ಬೀಡಿಯು ಜೀವನ ಸಿದ್ದಾಂತ ಹೇಳುತ್ತದೆ ಎಂದರು.

ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್ ಹೆಚ್.ಎಲ್. ಅವರು ಕೃತಿ ಬಿಡುಗಡೆ ಮಾಡಿದರು. ಗ್ರಾಮೀಣ ಮಹಿಳೆಯರಿಗೆ ಬೀಡಿಯಿಂದ ಸಬಲೀಕರಣ ಸಾಧ್ಯವಾಗಿದೆ ಎಂದು ಹೇಳಿದರು.

ಭಾರತ್ ಬೀಡಿ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ ಪೈ ಅವರು ಮಾತನಾಡಿ, ‘ಹಲವು ಕಾಲದಿಂದಲೂ ಬೀಡಿ ಸೇದುತ್ತಿರುವವರಿಗೆ ಏನೂ ಆಗಿಲ್ಲ. ಆದರೆ ಸಿಗರೇಟ್ ಲಾಬಿಯಿಂದ ಬೀಡಿಯ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಲಕ್ಷಾಂತರ ಜನರು ಬೀಡಿಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಹೆಂಚು, ಬ್ಯಾಂಕಿಂಗ್, ಗೇರುಬೀಜದ ರೀತಿಯಲ್ಲಿ ಬೀಡಿ ಕೂಡ ಕರಾವಳಿಯ ಆಧಾರವಾಗಿದೆ. ಈ ಪೈಕಿ ಒಂದೊಂದೇ ವಿಭಾಗವು ಬೇರೆ ಬೇರೆ ಹೆಸರಿನಲ್ಲಿ ಸಂಕಟದಲ್ಲಿದೆ. ಕಾರ್ಮಿಕರ ಪರವಾದ ಉದ್ಯಮ ಬೀಡಿಗೂ ಇಂತಹ ಸಂಕಟ ವಾತಾವರಣ ಎದುರಾಗಿದೆ ಎಂದರು.

ಮಂಗಳೂರು ಗಣೇಶ್ ಬೀಡಿ ವರ್ಕ್ಸ್‌ನ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಬೀಡಿಯನ್ನು ಉದ್ಯಮವಾಗಿ ನೋಡಿಲ್ಲ. ಬೀಡಿ ಕಟ್ಟುವವರನ್ನು, ಅದರ ಕೆಲಸ ಮಾಡುವವರನ್ನು ನಾವು ಕುಟುಂಬದವರಂತೆ ನೋಡಿದ್ದೇವೆ. ಈಗ ಬೀಡಿಗೆ ತೊಂದರೆ ಎದುರಾಗಿದೆ. ಸರ್ಕಾರದ ಸ್ಪಂದನೆ ಇಲ್ಲ. ಬೀಡಿ ಕ್ಯಾನ್ಸರ್‌ಕಾರಕ ಎಂದು ಹೇಳುವವರು ಇಲ್ಲಿಯವರೆಗೆ ಯಾವುದೇ ಸಾಕ್ಷಿ ನೀಡುತ್ತಿಲ್ಲ. ಬೀಡಿ ಉದ್ಯಮ ಒಂದು ವೇಳೆ ಮುಚ್ಚಲೂ ಸಿದ್ದರಿದ್ದೇವೆ. ಆದರೆ ಬೀಡಿಯನ್ನೇ ನಂಬಿಕೊಂಡ ಲಕ್ಷಾಂತರ ಜನರ ಬದುಕಿಗೆ ಮುಂದೇನು ಎಂಬುದಕ್ಕೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಉತ್ತರ ನೀಡಿಲ್ಲ ಎಂದರು.

ಬಿ.ವಿ.ಕಾರಂತ ರಂಗ ಪ್ರತಿಷ್ಠಾನ ಅಧ್ಯಕ್ಷ ಜಯರಾಮ ಪಾಟೀಲ, ಹಿಂದ್ ಮಜ್ದೂರ್ ಸಭಾ ಅಧ್ಯಕ್ಷ, ಕೃತಿಯ ಪರಿಕಲ್ಪನೆ ನಡೆಸಿದ ಮಹಮ್ಮದ್ ರಫಿ ಮಂಗಳೂರು, ಕೃತಿ ನಿರೂಪಣೆ ಮಾಡಿದ ಲೇಖಕ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.

ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ ಸ್ವಾಗತಿಸಿ, ನಿರೂಪಿಸಿದರು. ಹರೀಶ ಕೆ.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net