

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಆಟೋ ರಿಕ್ಷಾಗಳ ಸಂಚಾರದ ಕುರಿತಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಹೈಕೋರ್ಟ್ನ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಇ ಆಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆಂದು ಆರೋಪಿಸಿ ಇತ್ತೀಚೆಗೆ ಪೆಟ್ರೋಲ್, ಸಿಎನ್ಜಿ, ಎಲ್ಪಿಜಿ ಆಟೊ ಚಾಲಕರು ಪ್ರತಿಭಟನೆ ನಡೆಸಿದ ಸಂದರ್ಭ ನೀಡಿದ್ದ ಭರವಸೆಯಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಹೈ ಕೋರ್ಟ್ ನಿರ್ದೇಶನದಂತೆ ಮೇರೆಗೆ ಕಾನೂನು ಚೌಕಟ್ಟಿನೊಳಗೆ ಕಳೆದ ಜುಲೈ ೨೬ರಂದು ಆದೇಶ ಹೊರಡಿಸಲಾಗಿದೆ. ಅದನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ಹೈಕೋರ್ಟ್ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮಾತ್ರವಲ್ಲದೆ, ಆದೇಶದಲ್ಲಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಲಿಖಿತ ಮನವಿ ನೀಡಿದಲ್ಲಿ ಅದನ್ನು ಸರಿಪಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿವಿಧ ರಿಕ್ಷಾ ಚಾಲಕ ಮಾಲಕರ ಸಂಘಗಳ ಪ್ರತಿನಿಧಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಮೋಟಾರು ವಾಹನ ಕಾಯಿದೆ ೬೬ ಪ್ರಕಾರ ಎಲ್ಪಿಜಿ ಮತ್ತು ಸಿಎನ್ಜಿ ವಾಹನಗಳಿಗೆ ಪರವಾನಗಿ ನೀಡಲಾಗುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ೧೯೯೩-೯೪ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ವಾಹನಗಳ ಮಿತಿಯನ್ನು ನಿರ್ಬಂಧಿಸಲು ಕಾಯ್ದೆಯ ಸೆಕ್ಷನ್ ೧೧೫ರಡಿ ವಲಯ ಪರಿಕಲ್ಪನೆಯಡಿ ಆಟೋ ರಿಕ್ಷಾಗಳಿಗೆ ವಲಯ ೧ (ನಗರ)ಹಾಗೂ ವಲಯ ೨ (ಗ್ರಾಮಾಂತರ) ರಂತೆ ಪರವಾನಿಗೆ ನೀಡುವ ಅವಕಾಶ ಕಲ್ಪಿಸಿದ್ದರು. ಕೆಲ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಆಟೊಗಳು ರಸ್ತೆಗಿಳಿಯಲು ಆರಂಭವಾದಾಗ ಅದೇ ವಲಯ೧-೨ ನಿಯಮ ಇ-ಆಟೊಗಳಿಗೂ ಅನ್ವಯ ಮಾಡಲಾಗಿತ್ತು. ಇ-ಆಟೊಗಳಿಗೆ ದ.ಕ.ದಲ್ಲಿ ಮಾತ್ರ ಈ ನಿರ್ಬಂಧ ಇದ್ದುದನ್ನು ಪ್ರಶ್ನಿಸಿ ಇ-ಆಟೊ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಆದೇಶ ಪಾಲನೆ ಮಾಡಲಾಗಿದೆ ಎಂದು ಅವರು ಮನವರಿಕೆ ಮಾಡಿದರು.
ಮಂಗಳೂರು ನಗರದಲ್ಲಿಯೂ ಆಟೋರಿಕ್ಷಾಗಳ ಸಂಖ್ಯೆ, ಜನಸಂಖ್ಯೆ ಆಧಾರದಲ್ಲಿ ಇ ಆಟೋಗಳಿಗೆ ನಿರ್ಬಂಧ ಹೇರಬೇಕು ಎಂಬ ನಿಟ್ಟಿನಲ್ಲಿ ರಿಕ್ಷಾ ಸಂಘದವರು ನೀಡುವ ಮನವಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದವರು ಹೇಳಿದರು.
ಸಭೆಯ ಆರಂಭದಲ್ಲಿ ಆಗಮಿಸಿದ್ದ ಶಾಸಕ ವೇದವ್ಯಾಸ ಕಾಮತ್ರವರು ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕರ ಮಧ್ಯೆ ಉಂಟಾಗಿರುವ ಗೊಂದಲದಿಂದ ಜನಪ್ರತಿನಿಧಿಯಾಗಿ ತಾನು ಉಪಕಾರ ಮಾಡಿ ಬೈಗುಳ ತಿನ್ನುವ ಪರಿಸ್ಥಿತಿ ಎದುರಾಗಿದೆ. ಈ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ೨೫ಕ್ಕೂ ಅಧಿಕ ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇನೆ. ಸಂಬಂಧಪಟ್ಟವರ ಜತೆ ಚರ್ಚಿಸಿದ್ದೇನೆ. ಜನರ ಭಾವನೆಗಳಿಗೆ ತೊಂದರೆ ಆಗದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಗೊಂದಲವನ್ನು ಜಿಲ್ಲಾಧಿಕಾರಿ ಪರಿಹರಿಸುವಂತೆ ಆಗ್ರಹಿಸಿ ತೆರಳಿದರು.
ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ವಿವಿಧ ಸಂಘಟನೆಗಳ ಪರವಾಗಿ ವಿಷ್ಣುಮೂರ್ತಿ, ಸುನಿಲ್ ಕುಮಾರ್ ಬಜಾಲ್, ಅಶೋಕ್ ಕುಮಾರ್, ಲೋಕೇಶ್ ಶೆಟ್ಟಿ ಮೊದಲಾದವರು ಆಗ್ರಹಿಸಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಎಸ್ಪಿ ಯತೀಶ್, ಮನಪಾ ಆಯುಕ್ತ ಆನಂದ್, ಆರ್ಟಿಒ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.
---