ಮಾದಕ ವಸ್ತು ಮಾರಾಟ ಇಬ್ಬರ ಬಂಧನ ಸಿಸಿಬಿ ಪೊಲೀಸರ ಕಾರ್ಯಾಚರಣೆ

mng--28 march Roysten
Published on

ಮಂಗಳೂರು: ನಗರದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಮಂಗಳೂರು ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ರೂ. ಮೌಲ್ಯದ ಹೈಡ್ರೋವಿಡ್ ಗಾಂಜಾ, ಚರಸ್, ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಂಡೇಶ್ವರ ಸುಭಾಷ್‌ನಗರ 2ನೇ ಕ್ರಾಸ್ ರಸ್ತೆ ನಿವಾಸಿ ತೈಸಿರ್ ಇಸ್ಮಾಯಿಲ್ ಹುಸೈನ್(23), ಮೂಲತಃ ಬಂಟ್ವಾಳ ಬೋಳಂಗಡಿ ನಿವಾಸಿ, ಪ್ರಸ್ತುತ ಶಿವಭಾಗ್ ನಿವಾಸಿ ರೋಯಸ್ಟನ್ ಕ್ಸವಿಯರ್ ಲೋಬೋ(22) ಬಂಧಿತ ಆರೋಪಿಗಳು.

ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುವಾದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾವನ್ನು ಖರೀದಿಸಿಕೊಂಡು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಶಿವಭಾಗ್ 5 ನೇ ಕ್ರಾಸ್ ರಸ್ತೆಯಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ್ದಾರೆ.

* ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ: ಆರೋಪಿಗಳಿಂದ ಸುಮಾರು 8 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು ಹೈಡ್ರೋವೀಡ್, ಗಾಂಜಾ, ಚರಸ್ ಮತ್ತು ಮೊಬೈಲ್ ೆನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪತ್ತೆ ಕಾರ್ಯವನ್ನು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ, ಡಿಸಿಪಿಗಳಾಧ ಸಿದ್ದಾರ್ಥ್ ಗೋಯಲ್, ಕೆ. ರವಿಶಂಕರ್ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ ಎಂ, ಪಿಎಸ್‌ಐ ನರೇಂದ್ರ, ಎಎಸ್‌ಐ ಯವರಾದ ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net