

ಮಂಗಳೂರು: ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಬೆಹ್ರೈನ್‌ನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಕನ್ನಡಿಗ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ಅವರನ್ನು ಬೆಹ್ರೈನ್ ಪೊಲೀಸರು ಬಂಧಿಸಿದ್ದಾರೆ.
ಹಮಾಸ್ ಉಗ್ರರನ್ನು ವಿರೋಧಿಸಿ, ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್ ರಾವ್ ಹಾಕಿದ್ದ ಪೋಸ್ಟ್ ಟ್ವಿಟರ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್‌ನ್ನು ಆಡಳಿತಕ್ಕೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಾ.ಸುನಿಲ್ ಅವರು ರಾಯಲ್ ಹಾಸ್ಪಿಟಲ್ ಬೆನ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ಬೆಹ್ರೈನ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಡಾ.ಸುನೀಲ್ ರಾವ್ ಅವರ ಪೋಸ್ಟ್ ನಮ್ಮ ಸಮಾಜಕ್ಕೆ ವಿರುದ್ಧವಾಗಿದೆ. ಅವರ ಸಿದ್ಧಾಂತ ನಮಗೆ ಒಪ್ಪಿತವಲ್ಲ. ಅದು ನಮ್ಮ ನಿಲುವಲ್ಲ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ಬಹ್ರೈನ್ ರಾಯಲ್ ಆಸ್ಪತ್ರೆ ಪ್ರತಿಕ್ರಿಯಿಸಿದೆ
ಕೆಲಸದಿಂದ ವಜಾಗೊಳಿಸುವ ಮುನ್ನ ಡಾ.ಸುನಿಲ್ ರಾವ್ ಅವರು ಕ್ಷಮೆ ಕೇಳಿದ್ದರು. ಬಹ್ರೈನ್‌ನಲ್ಲಿ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್ ಆಗಿ ಸಾವು, ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್ ಮಾಡಿದ್ದರು.
ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಎಂಡಿ ಮಾಡಿದ್ದ ಡಾ.ಸುನಿಲ್ ರಾವ್, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್ ಪೂರೈಸಿದ್ದರು.