

ಮಂಗಳೂರು: ಚಲನಚಿತ್ರ, ರಂಗಭೂಮಿ ಸಾಧಕ ಸದಾನಂದ ಸುವರ್ಣ ನಿರ್ದೇಶಕನಾಗಿ, ಕಲಾ ಪ್ರೋತ್ಸಾಹಕನಾಗಿ ಅವರ ಕೆಲಸ ಸ್ಮರಣೀಯ ಎಂದು ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ತುಳು ಭವನದಲ್ಲಿ ಶನಿವಾರ ದಿನಪೂರ್ತಿ ಆಯೋಜಿಸಲಾದ ‘ಸುವರ್ಣ ಸ್ಮರಣೆ’ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಅವರು ವಿಡಿಯೋ ಸಂದೇಶ ನೀಡಿದರು.
ನನ್ನ ಚಿತ್ರ ಜೀವನದ ಹಾದಿ ಸುಗಮವಾಗಲು ಸುವರ್ಣರು ಹಾಕಿದ ಅಡಿಪಾಯವೇ ಕಾರಣ. ಅವರು ನನ್ನ ಬೆನ್ನಿಗೆ ನಿಲ್ಲದಿದ್ದರೆ ನನಗೆ ಶಕ್ತಿ ಬರುತ್ತಿರಲಿಲ್ಲ. ಅವರ ಜತೆಗೆ ಕೆಲವು ಸಿನೆಮಾಗಳಿಗೆ ಪ್ರೀತಿಯಿಂದ ದುಡಿದಿದ್ದೇನೆ. ಅವರು ಪ್ರಭಾವ ಬೀರುವ ಶಕ್ತಿಯಾಗಿದ್ದರು. ನೇರವಾಗಿ ಹೇಳುವವರಾಗಿದ್ದರೂ ಹೃದಯದಿಂದ ಮಾತನಾಡುತ್ತಿದ್ದರು ಎಂದರು.
ಖ್ಯಾತ ಸಿನೆಮಾಟೋಗ್ರಾರ್ ಜಿ.ಎಸ್. ಭಾಸ್ಕರ ಉದ್ಘಾಟಿಸಿ ಮಾತನಾಡಿ, ‘ಸುವರ್ಣ ಅವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಬಹಳ ಒಳ್ಳೆಯ ಕೆಲಸ. ಸದಾನಂದ ಸುವರ್ಣ ನೆನಪು ಶಾಶ್ವತವಾಗಿರಲಿ’ ಎಂದರು.
‘ಗುಡ್ಡೆದ ಭೂತ’ ಧಾರವಾಹಿಯಲ್ಲಿ ನಟಿಸಿದ ಹಿರಿಯ ನಟಿ ಗೀತಾ ಸುರತ್ಕಲ್ ಮಾತನಾಡಿ, ನನಗೆ ಗುಡ್ಡೆದ ಭೂತದಲ್ಲಿ ಅವಕಾಶ ನೀಡುವಾಗ ಸುವರ್ಣ ಅವರು ಸಂಭಾವನೆ ಜಾಸ್ತಿ ಕೊಡಲು ಆಗುವುದಿಲ್ಲ ಎಂದು ಆರಂಭದಲ್ಲಿಯೇ ಹೇಳಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದರು. ಆದರೆ ಧಾರಾವಾಹಿ ಮುಗಿದ ಬಳಿಕ ಎಲ್ಲಕ್ಕಿಂತ ಹೆಚ್ಚು ಸಂಭಾವನೆ ಕೊಟ್ಟಿದ್ದರು ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.
ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ಬೈಲ್, ಕಲಾವಿದರಾದ ಲಕ್ಷ್ಮಣ್ ಕುಮಾರ್ ಮಲ್ಲೂರು, ಚಂದ್ರಹಾಸ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಟ್ರಸ್ಟಿ ನಟೇಶ್ ಉಳ್ಳಾಲ ನಿರೂಪಿಸಿದರು.
ಸದಾನಂದ ಸುವರ್ಣ ಸಿನೆಮಾ-ಧಾರವಾಹಿ ಸರಣಿಗಳು, ತುಳು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳ ಬಗ್ಗೆ ಉಪನ್ಯಾಸ, ಸಂವಾದ ಗೋಷ್ಠಿ ಮತ್ತು ‘ಕೋರ್ಟ್ ಮಾರ್ಷಲ್’ ನಾಟಕ ಕೂಡ ಪ್ರದರ್ಶಿಸಲಾಯಿತು.
ಬಾಕ್ಸ್
ಸುವರ್ಣ ನೆನಪಿನಲ್ಲಿ ೆಲೋಶಿಪ್
ರಂಗಕರ್ಮಿ ದಿ.ಸದಾನಂದ ಸುವರ್ಣ ಅವರ ಕುರಿತಾಗಿ ಯಾರಾದರೂ ಆಸಕ್ತರು ಅಧ್ಯಯನ ನಡೆಸಲು ಮುಂದೆ ಬಂದರೆ ಅವರಿಗೆ ಅಕಾಡೆಮಿಯಿಂದ ೆಲೋಶಿಪ್ ನೀಡಲು ತುಳು ಸಾಹಿತ್ಯ ಅಕಾಡೆಮಿ ಸಿದ್ದವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.
ಯುವಜನತೆಗೆ ರಂಗಭೂಮಿ ಸೇರಿದಂತೆ ಸಿನೆಮಾದ ಕುರಿತು ಹೆಚ್ಚಿನ ಮಾಹಿತಿ ಸಿಗಬೇಕು ಎನ್ನುವ ಕನಸು ಸುವರ್ಣ ಅವರಿಗಿತ್ತು. ಈ ಕಾರಣದಿಂದ ಅಕಾಡೆಮಿ ಕಡೆಯಿಂದ ಅವರ ಹೆಸರಿನಲ್ಲಿ ಡಾಕ್ಯುಮೆಂಟರಿ ಸ್ಪರ್ಧೆಯನ್ನು ಮಾಡುವ ಯೋಜನೆಯಿದೆ. ಅವರ ಆತ್ಮಕಥನವನ್ನು ಮರು ಪ್ರಕಟಿಸುವ ಕೆಲಸವನ್ನು ಕೂಡ ಮಾಡಲು ಉತ್ಸುಕರಾಗಿದ್ದೇವೆ ಎಂದರು.