ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್‌ನ ಸಕಾಲಿಕ ಎಚ್ಚರಿಕೆ ಹಿರಿಯ ಗ್ರಾಹಕಿಯ 1.35 ಕೋಟಿ ರೂ. ರಕ್ಷಣೆ

Fruad
Published on

ಮಂಗಳೂರು: ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯ ಮ್ಯಾನೇಜರ್ ಅವರ ಸಕಾಲಿಕ ಎಚ್ಚರಿಕೆಯಿಂದ ಹಿರಿಯ ವೃದ್ಧೆಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ 1.35 ಕೋಟಿ ರೂ. ರಕ್ಷಣೆಯಾಗಿದೆ.

ಬ್ಯಾಂಕಿನ ಹಿರಿಯ ಗ್ರಾಹಕಿಯೊಬ್ಬರು ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯಲ್ಲಿ 1.35 ಕೋಟಿ ರೂ. ಫಿಕ್ಸೆಡ್ ಡಿಪಾಸಿಟ್ ಇರಿಸಿದ್ದರು. ಈ ಮೊತ್ತವನ್ನು ತನಗೆ ತಕ್ಷಣವೇ ನೀಡುವಂತೆ ಅವರು ಕೋರಿದ್ದರು. ಮಹಿಳೆ ಬಹಳ ಆತಂಕದಿಂದ ಇರುವುದನ್ನು ಕಂಡ ಶಾಖೆಯ ಮ್ಯಾನೇಜರ್ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು. ಗ್ರಾಹಕರು ಯಾರೊಂದಿಗೋ ಆಗಾಗ ಕರೆಯಲ್ಲಿ ನಿರತರಾಗಿದ್ದನ್ನು ಗಮನಿಸಿದ ಹಾಗೂ ಆಗಾಗ್ಗೆ ಪಾವತಿಯ ಪ್ರಗತಿಯ ಬಗ್ಗೆ ಅಪ್‌ಡೇಟ್ ಮಾಡುತ್ತಿದ್ದುದನ್ನು ಗಮನಿಸಿದ ಮ್ಯಾನೇಜರ್ ಅವರಿಗೆ ಅದು ಸೈಬರ್ ವಂಚನೆ (ಡಿಜಿಟಲ್ ಅರೆಸ್ಟ್) ಎಂಬ ಅನುಮಾನ ಬಂದಿತ್ತು. ಈ ಬಗ್ಗೆ ಬ್ರಾಂಚ್ ಮ್ಯಾನೇಜರ್ ಅವರು ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತ್ತು. ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್ ಬ್ರಾಂಚ್‌ನ್ನು ಸಂಪರ್ಕಿಸಿದರು. ಪೊಲೀಸರು ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು.

ವಂಚಕರು ವೃದ್ಧೆ ಗ್ರಾಹಕಿಯನ್ನು ಪೊಲೀಸ್ ಅಧಿಕಾರಿಗಳು ಎಂದು ಹೇಳಿ ವಂಚಿಸಲು ಪ್ರಯತ್ನಿಸುತ್ತಿದ್ದರು. ಅವರು ಜಾರಿ ನಿರ್ದೇಶನಾಲಯ(ಇ.ಡಿ.)ದ ದಾಳಿಯಲ್ಲಿ ಅವರು ಈ ಗ್ರಾಹಕರಿಗೆ ಸೇರಿದ 300-400 ಡೆಬಿಟ್ ಕಾರ್ಡ್‌ಗಳು ಸಿಕ್ಕಿದ್ದು ಅದರಲ್ಲಿ ಒಂದು ಈ ಗ್ರಾಹಕಿಗೆ ಸೇರಿದೆ ಎಂದು ಹೇಳಿದ್ದರು. ಅವರು ಗ್ರಾಹಕಿಯ ಖಾತೆಯನ್ನು ಹಣ ವರ್ಗಾವಣೆಗೆ ಬಳಸಲಾಗುತ್ತಿದ್ದು ಅದನ್ನು ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ನಂತರ ವಂಚಕರು ಆರ್.ಬಿ.ಐ. ಖಾತೆ ಎಂದು ಹೇಳಿ ಅದಕ್ಕೆ ಹಣ ಕಳಿಸುವಂತೆ ಒತ್ತಾಯಿಸಿದರು. ಗ್ರಾಹಕಿಗೆ ಈ ವ್ಯವಹಾರದಲ್ಲಿ ಪಾಲಿಲ್ಲವಾದರೆ ಬಡ್ಡಿ ಸಮೇತ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ವಂಚಕರು ವಿಡಿಯೋ ಕಾಲ್‌ನಲ್ಲಿ ಪೊಲೀಸ್ ಅಧಿಕಾರಿಗಳಂತೆ ಬಟ್ಟೆ ಧರಿಸಿದ್ದರು ಮತ್ತು ಸುಳ್ಳು ಅರೆಸ್ಟ್ ವಾರೆಂಟ್ ಪ್ರದರ್ಶಿಸಿದ್ದರು. ಬ್ಯಾಂಕ್ ಮ್ಯಾನೇಜರ್‌ರ ಸಕಾಲಿಕ ಎಚ್ಚರಿಕೆಯ ನಡವಳಿಕೆಯಿಂದಾಗಿ ಗ್ರಾಹಕರು ಡಿಜಿಟಲ್ ಅರೆಸ್ಟ್ ವಂಚನೆಯಿಂದ ಪಾರಾಗಿದ್ದಾರೆ.

* ಡಿಜಿಟಲ್ ಅರೆಸ್ಟ್ ಎಂದರೇನು

ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ವಂಚಕರು ವ್ಯಕ್ತಿಗಳು ಅಥವಾ ಉದ್ಯಮಿಗಳಿಗೆ ಕಾನೂನು ಜಾರಿ ಅಥವಾ ಸರ್ಕಾರಿ ಅಧಿಕಾರಿಗಳು ಎಂದು ತೋರಿಸಿಕೊಳ್ಳುತ್ತಾರೆ. ಬಲಿಪಶುಗಳನ್ನು ತೆರಿಗೆ ವಂಚನೆ, ನಿಯಮ ಉಲ್ಲಂಘನೆ ಅಥವಾ ಹಣಕಾಸು ದುರುಪಯೋಗ ಎಂದು ಆರೋಪಿಸಿ ಡಿಜಿಟಲ್ ಅರೆಸ್ಟ್ ವಾರೆಂಟ್ ಮೂಲಕ ಬೆದರಿಸುತ್ತಾರೆ. ವಂಚಕರು ಡಿಜಿಟಲ್ ಅರೆಸ್ಟ್ ವಾರೆಂಟ್ ಹಿಂಪಡೆಯಲು ‘ಸೆಟ್ಲ್ ಮೆಂಟ್ ಶುಲ್ಕ ಅಥವಾ ‘ದಂಡ ಎಂದು ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಾರೆ. ಒಮ್ಮೆ ಹಣ ಪಾವತಿಯಾದ ನಂತರ ವಂಚಕರು ಏನೂ ಗುರುತು ಬಿಡದೆ ಕಣ್ಮರೆಯಾಗುತ್ತಾರೆ. ಬಲಿಯಾದವರು ಹಣ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ವಂಚಕರಿಗೆ ವೈಯಕ್ತಿಕ ವಿವರಗಳನ್ನು ನೀಡಿ ಕಳ್ಳತನಕ್ಕೆ ಒಳಗಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net