ಕರಾವಳಿಯಲ್ಲಿ ಶ್ರದ್ಧಾ ಭಕ್ತಿಯ ಪಾಮ್ ಸಂಡೇ ಆಚರಣೆ

mng--13 April Urva church 3
Published on

ಮಂಗಳೂರು: ಕರಾವಳಿಯ ವಿವಿಧ ಚರ್ಚ್‌ಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪಾಮ್ ಸಂಡೇ (ಗರಿಗಳ ಭಾನುವಾರ) ಆಚರಿಸಲಾಯಿತು.

ಯೇಸು ಕ್ರಿಸ್ತರು ಶಿಲುಬೆಗೆ ಏರುವ ಒಂದು ವಾರದ ಮೊದಲು ಅಂದಿನ ಜೆರೋಸಲೆಂ ಪಟ್ಟಣವನ್ನು ಯೇಸುಕ್ರಿಸ್ತರು ಪ್ರವೇಶಿಸುವಾಗ ಯಹೂದಿ ಸಮುದಾಯದವರು ಅಲಿವ್ ಮರದ ಗರಿಗಳಿಂದ ದಾರಿಯನ್ನು ಶೃಂಗರಿಸಿಕೊಂಡು ಅವರನ್ನು ಬರಮಾಡಿಕೊಳ್ಳಲಾಯಿತು ಎನ್ನುವ ನಂಬಿಕೆಯ ಮೇಲೆ ಈ ಹಬ್ಬದ ಆಚರಣೆ ಪ್ರತಿ ವರ್ಷನೂ ನಡೆಯುತ್ತದೆ. ವಿಶೇಷವಾಗಿ ಕ್ರೈಸ್ತರು ಆಚರಿಸುವ ಕಪ್ಪು ತಿಂಗಳ ಕೊನೆ ವಾರದಲ್ಲಿ ಪವಿತ್ರವಾರದ ಆರಂಭದ ದಿನದಂದು ಕ್ರೈಸ್ತರು ಗರಿಗಳ ಭಾನುವಾರ ಎಂದು ಆಚರಿಸುತ್ತಾರೆ.

ನಗರದ ರೊಸಾರಿಯೋ ಚರ್ಚ್, ಮಿಲಾಗ್ರಿಸ್ ಚರ್ಚ್, ಲೇಡಿಹಿಲ್ ಚರ್ಚ್, ಅಶೋಕ ನಗರ ಚರ್ಚ್, ಬಿಜೈ ಚರ್ಚ್, ಬಿಕರ್ನಕಟ್ಟೆ ಬಾಲಯೇಸು ಮಂದಿರ, ಕೂಳೂರು ಚರ್ಚ್ ಸೇರಿದಂತೆ ಮಂಗಳೂರು, ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್ಗಳಲ್ಲಿ ಗರಿಗಳ ಹಬ್ಬ ಆಚರಿಸುವ ಮೂಲಕ ಕ್ರೈಸ್ತರು ಮುಂದೆ ಬರುವ ಪವಿತ್ರ ಗುರುವಾರ, ಶುಭ ಶುಕ್ರವಾರ(ಗುಡ್‌ಫ್ರೈಡೇ), ಪುನರುತ್ಥಾನದ ಶನಿವಾರ ಹಾಗೂ ಈಸ್ಟರ್ ಹಬ್ಬಕ್ಕೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಧರ್ಮಗುರುಗಳು ಚರ್ಚ್‌ಗಳಲ್ಲಿ ಪವಿತ್ರ ಕೃತಜ್ಞತಾ ಪೂಜೆಯ ಮೊದಲು ಗರಿಗಳನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿದ ಬಳಿಕ ಗರಿಗಳ ಪೂಜೆಯನ್ನು ಮಾಡಿ ವಾಳೆಗಳ ಗುರಿಕಾರರ ಮೂಲಕ ಕಥೋಲಿಕ್ ಕುಟುಂಬಗಳಿಗೆ ಗರಿಗಳ ಹಂಚುವಿಕೆ ಕಾರ್ಯ ಮಾಡುತ್ತಾರೆ. ಈ ಗರಿಗಳನ್ನು ಮೆರವಣಿಗೆಯ ಮೂಲಕ ಹಿಡಿದುಕೊಂಡು ಭಕ್ತರು ಚರ್ಚ್‌ಗಳಿಗೆ ಬರುತ್ತಾರೆ. ಈ ಸಮಯದಲ್ಲಿ ಚರ್ಚ್ ಒಳಗೆ ಪ್ರವೇಶ ಪಡೆದ ಬಳಿಕ ಈ ಗರಿಗಳನ್ನು ಹಿಡಿದುಕೊಂಡು ಪೂಜಾವಿಧಿಗಳಲ್ಲಿ ಭಾಗವಹಿಸುತ್ತಾರೆ. ಈ ಬಳಿಕ ಈ ಗರಿಗಳನ್ನು ಪಡೆದು ಕ್ರೈಸ್ತ ಸಮುದಾಯದವರು ಶಿಲುಬೆ ಪ್ರತಿರೂಪ ರಚಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ.

 ವಿಶೇಷ ಕೃತಜ್ಞತಾ ಪೂಜೆ: ಪಾಮ್ ಸಂಡೇಯಂದು ಕರಾವಳಿಯ ಚರ್ಚ್‌ಗಳಲ್ಲಿ ವಿಶೇಷ ಕೃತಜ್ಞತಾ ಪೂಜೆ ಹಾಗೂ ಬೈಬಲ್‌ನಲ್ಲಿ ಹೇಳಿದ ಯೇಸುವಿನ ಕೊನೆಯ ದಿನಗಳ ಹಾದಿಯನ್ನು ಪ್ರಾರ್ಥನೆ ಹಾಗೂ ಕೀರ್ತನೆಗಳ ಮೂಲಕ ಭಕ್ತರಿಗೆ ಧರ್ಮಗುರುಗಳು ಪ್ರವಚನದ ಮೂಲಕ ತಿಳಿಯಪಡಿಸಿದರು. ಇದರ ಜತೆಯಲ್ಲಿ ಬೈಬಲ್‌ನಲ್ಲಿರುವ ಪ್ರಮುಖ ವಿಚಾರಗಳನ್ನು ಇಂದಿನ ಆಧುನಿಕ ಸಮಾಜಕ್ಕೆ ಆಳವಡಿಸಿಕೊಂಡು ಕೆಲವೊಂದು ಚರ್ಚ್‌ಗಳಲ್ಲಿ ಸಂಜೆ ಹೊತ್ತು ಯೇಸುವಿನ ಜೀವನಧಾರಿತ ನಾಟಕಗಳನ್ನು ತೋರಿಸುವ ಕೆಲಸಗಳು ಸಾಗಿತು.

ಧರ್ಮಗುರುಗಳು ಬೈಬಲ್ನಲ್ಲಿರುವ ಯೇಸುವಿನ ಜೆರುಸಲೆಂ ಪ್ರವೇಶದ ಸನ್ನಿವೇಶವನ್ನು ಸ್ಮರಿಸುತ್ತಾರೆ ಹಾಗೂ ಸಂದೇಶ ನೀಡುತ್ತಾರೆ. ಯೇಸು ಕ್ರಿಸ್ತರಿಗೆ ಶಿಲುಬೆಯ ಶಿಕ್ಷೆ ಶಿಕ್ಷೆ ವಿಧಿಸುವಲ್ಲಿಂದ ಹಿಡಿದು ಅವರು ಶಿಲುಬೆಗೇರಿ ಅಲ್ಲಿ ಮರಣ ಹೊಂದಿ ಅವರ ದೇಹವನ್ನು ಸಮಾಧಿ ಮಾಡುವಲ್ಲಿ ವರೆಗಿನ ಕಥಾನಕವನ್ನು ಬೈಬಲ್‌ನಿಂದ ವಾಚಿಸಲಾಗುತ್ತದೆ. ಇದರ ಆಧಾರದಲ್ಲಿ ಅಂದಿನ ವಿಶೇಷ ಪ್ರವಚನ ಸಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net