ಗಬ್ಬು ನಾರುತ್ತಿದೆ ಜಿಲ್ಲಾಧಿಕಾರಿ ಆವರಣದ ಶೌಚಗೃಹ !

mng--10 may Dc toilet 4
Published on


ಹರೀಶ್ ಮೋಟುಕಾನ, ಮಂಗಳೂರು


ಪರಿಸರವಿಡೀ ದುರ್ನಾತ, ಒಳಗೆ ತರಗೆಲೆ, ಕಸ ಕಡ್ಡಿಗಳ ರಾಶಿ, ಪೂರೈಕೆಯಾಗದ ನೀರು, ಮನುಷ್ಯನಾದವನಿಗೆ ಬಳಸಲು ಅಸಾಧ್ಯ ಸ್ಥಿತಿ. ಇದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹದ ದುಸ್ಥಿತಿ.


ಕಟ್ಟಡದ ಮಾಡು ಅರ್ಧದಷ್ಟಿದ್ದು, ಮಳೆಗಾಲದಲ್ಲಿ ಬಳಕೆಗೆ ಕಷ್ಟ. ಶೌಚಗೃಹಕ್ಕೆ ನೀರು ಪೂರೈಕೆಯಾಗದ ಕಾರಣ ಹಲವು ಸಮಯದಿಂದ ಅದನ್ನು ಶುಚಿಗೊಳಿಸದೆ ಗಬ್ಬು ವಾಸನೆ ಬರುತ್ತಿದೆ. ಇದರ ಒಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಇದೆ. ಇದು ಜಿಲ್ಲಾಧಿಕಾರಿ ಕಚೇರಿಗೆ ಕಪ್ಪು ಚುಕ್ಕೆಯಾಗಿದೆ.


ಇಲ್ಲಿರುವ ಕಟ್ಟಡವನ್ನು ಪುರಾತತ್ವ ಇಲಾಖೆ ಪಾರಂಪರಿಕ ಕಟ್ಟಡ ಎಂದು ಗುರುತಿಸಿದೆ. ಈ ಕಟ್ಟಡದಲ್ಲಿ ಕೆಲವು ಸರ್ಕಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆ. ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ಇಲ್ಲಿ ಬರುತ್ತಾರೆ. ಅವರು ಇದೇ ಶೌಚಗೃಹವನ್ನು ಅವಲಂಬಿಸಿದ್ದಾರೆ. ಕ್ಯಾಂಟೀನ್ ಕೂಡಾ ಕಾರ್ಯಾಚರಿಸುತ್ತಿದ್ದು, ಅಲ್ಲಿನ ಸಿಬ್ಬಂದಿ ಈ ಶೌಚಗೃಹ ಬಳಸುತ್ತಿದ್ದಾರೆ. ನಿರ್ವಹಣೆ ಇಲ್ಲದೆ ಸದ್ಯ ಯಾರು ಕೂಡಾ ಬಳಸುವ ಹಾಗಿಲ್ಲ.
ಕಳೆಗುಂದಿದ ಪಾರ್ಕ್: ಇಲ್ಲಿ ಹೂ ತೋಟವಿರುವ ಎರಡು ಪಾರ್ಕ್‌ಗಳಿದ್ದು, ನಿರ್ವಹಣೆ ಇಲ್ಲದೆ ಕಾಡು ಬೆಳೆದಿದೆ. ನೀರು ಹಾಕದೆ ಹೂವಿನ ಗಿಡಗಳು ಒಣಗಿ ಹೋಗಿವೆ. ಆವರಣ ಕೂಡಾ ಕಸ, ಕಡ್ಡಿಗಳಿಂದ ತುಂಬಿಕೊಂಡಿದೆ. ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ. ಇಲ್ಲಿ ಬರುವ ಸಾರ್ವಜನಿಕರು ಈ ಕಳೆಗುಂದಿದ ತಾಣವನ್ನು ನೋಡಿ ಮರುಕ ಪಡುವಂತಾಗಿದೆ.


ಪಾರಂಪರಿಕ ಕಟ್ಟಡವನ್ನು ಸುಂದರವಾಗಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವ ವಿಫುಲ ಅವಕಾಶವಿದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸ್ಥಳ ಪಾಳು ಬಿದ್ದಂತಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡುವಾಗ ಇಲ್ಲೂ ಯೋಜನೆ ರೂಪಿಸಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಬಹುದಾಗಿದೆ.


ಭದ್ರತಾ ಸಿಬ್ಬಂದಿ ಇಲ್ಲ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಕೆಲವೊಮ್ಮೆ ಇಲ್ಲಿನ ವಿದ್ಯುತ್ ಬಲ್ಬ್‌ಗಳು ಹಾಳಾದರೆ ಅದನ್ನು ಜೋಡಿಸುವ ತನಕ ಆವರಣ ಕತ್ತಲಿನಲ್ಲಿರುತ್ತದೆ. ದುಷ್ಕರ್ಮಿಗಳು ಅಕ್ರಮವಾಗಿ ಪ್ರವೇಶಿಸಿ, ಏನಾದರೂ ದುಷ್ಕೃತ್ಯ ಎಸಗಿದರೆ ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ.
ಸಚಿವರು, ಸಂಸದರ ಕಚೇರಿ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಕಚೇರಿಗಳು ಇವೆ. ಇವುಗಳ ಅನತಿ ದೂರದಲ್ಲಿ ಗಬ್ಬು ನಾರುತ್ತಿರುವ ಈ ಶೌಚಗೃಹ ಇದೆ. ಇದನ್ನು ಶುಚಿಗೊಳಿಸದೆ ವರ್ಷವೇ ಕಳೆದಂತಿದೆ. ಹೀಗೆ ಇದ್ದರೆ ರೋಗ ಹರಡುವ ಭೀತಿ ಎದುರಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣ ನಿರ್ವಹಣೆ ಇಲ್ಲದೆ ಕಳೆಗುಂದಿದೆ. ಇಲ್ಲಿರುವ ಶೌಚಗೃಹ ನಿರ್ವಹಣೆ ಇಲ್ಲದೆ ಪರಿಸರವೇ ಗಬ್ಬು ನಾರುತ್ತಿದೆ. ಸಾರ್ವಜನಿಕರು ಇದನ್ನು ಉಪಯೋಗಿಸುವ ಸ್ಥಿತಿ ಇಲ್ಲ. ಸಂಬಂಧಪಟ್ಟವರು ತಕ್ಷಣ ಗಮನ ವಹಿಸಿ, ಸರಿಪಡಿಸಬೇಕು.
ಗೋಪಾಲಕೃಷ್ಣ ಭಟ್
ಸಾಮಾಜಿಕ ಕಾರ್ಯಕರ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net