

ವಿಜಯವಾಣಿ ಸುದ್ದಿಜಾಲ ಮಂಗಳೂರು
ಶ್ರೀ ಹರ ಅಸೋಸಿಯೇಟ್ಸ್ ಮತ್ತು ಶ್ರೀ ಹರ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಗುರಾತಿನ ಸಾಂಪ್ರದಾಯಿಕ ಜಾನಪದ ನೃತ್ಯ ‘ಮಂಗಳೂರು ದಾಂಡಿಯಾ ನೈಟ್’ ಅಕ್ಟೋಬರ್ 9 ರಿಂದ 11 ತನಕ ತೊಕ್ಕೊಟ್ಟು ಸಮೀಪದ ಸಂಕೋಳಿಗೆ ಶಕ್ತಿ ಮೈದಾನದಲ್ಲಿ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಸೌಮ್ಯಾ ಮಾಡ ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳು ಸಹಿತ ಒಟ್ಟು 12 ತಂಡಗಳು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿವೆ. ಅ.9 ರಂದು ಸಂಜೆ 5.30 ಕ್ಕೆ ಬೀರಿಯಿಂದ ಸಂಕೋಳಿಗೆ ತನಕ ಕರ್ಷಕ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ, ಸಭಾ ಕಾರ್ಯಕ್ರಮದಲ್ಲಿ ರಾಜ ಬೆಳ್ಚಡ ಅವರು ದೀಪ ಬೆಳಗುವರು. ಈ ಸಂದರ್ಭ 80 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ಚಿತ್ರನಟರು, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 10 ಗಂಟೆಯವರೆಗೆ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ಟೋಬರ್ 10 ರಂದು ಪ್ರಸಾದನ ಕಲಾವಿದರಾದ ಜಗದೀಶ್ ವೈದ್ಯರ್ ಮತ್ತು ರಾಜೇಶ್ ಬೆರಿಮಾರ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ನೀಡುವವರು ಸಾಂಪ್ರದಾಯಿಕ ಉಡುಪು ಧರಿಸುವುದು ಆವಶ್ಯಕ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸುಜಾತಾ ವಿ.ಉಚ್ಚಿಲ, ಸಂಘಟನಾ ಕಾರ್ಯದರ್ಶಿ ಶವಿತ್ ಉಚ್ಚಿಲ, ಪ್ರವೀಣ್ ಬಸ್ತಿ, ಸುರೇಖಾ ಜಯಪ್ರಕಾಶ್, ಸುಕೇಶ್ ಮಂಜನಾಡಿ, ಗೌರವಾಧ್ಯಕ್ಷ ಮೋಹನ್ ಬಿ.ತುಂಬೆ ಉಪಸ್ಥಿತರಿದ್ದರು.