

ಮಂಗಳೂರು: ತಮ್ಮೊಂದಿಗೆ ಇತರ ಸಮಾಜದವರನ್ನು ಬೆಳೆಸುವ ಅದ್ವಿತಿಯ ಕೆಲಸವನ್ನು ದೈವಜ್ಞ ಸಮಾಜ ಮಾಡಿದೆ. ಇಂತಹ ಮನೋಭಾವ ಇದ್ದಾಗ ಸಮಾಜ ಸಮೃದ್ಧಿಯಾಗುತ್ತದೆ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಹೇಳಿದರು.
ಎಸ್.ಎಲ್.ಶೇಟ್, ಎಂ.ರಘುನಾಥ್ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಸಂಘಟನೆ ಹಾಗೂ ಶ್ರೇಯೋಭಿವೃದ್ದಿಗಾಗಿ ಮಂಗಳೂರಿನಲ್ಲಿ ಫೆ.12ರಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಶುಕ್ರವಾರ ಸಂಘನಿಕೇತನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನವಿತ್ತರು.
ಸಮಾಜದಲ್ಲಿ ಹಲವು ಮನೋಭಾವಗಳು ಒಗ್ಗಟ್ಟಾದಾಗ ಮಾತ್ರ ಸಮಾಜ ಭದ್ರವಾಗಲು ಸಾಧ್ಯ. ಅದೇ ರೀತಿಯಾಗಿ ದೈವಜ್ಞ ಬ್ರಾಹ್ಮಣ ಸಮಾಜವನ್ನು ಸಂಘಟಿಸಿ, ಬಲಪಡಿಸಬೇಕು ಎಂಬ ಉದ್ದೇಶದಿಂದಲೇ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಎಸ್.ಎಲ್.ಶೇಟ್ ಹಾಗೂ ಎಂ.ರಘುನಾಥ್ ಶೇಟ್ ಅವರು ಸಮಾಜದ ಶ್ರೇಯಸ್ಸಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಆ ಪರಂಪರೆ ಈಗಲೂ ಮುಂದುವರಿದಿರುವುದು ಉತ್ತಮ ಕಾರ್ಯ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಸಂಘಟನೆ ಹಾಗೂ ಶ್ರೇಯೋಭಿವೃದ್ದಿಗಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನೆರವೇರಿದೆ. ದೈವಜ್ಞ ಸಮಾಜವು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.
ಕೈಗಾರಿಕಾ ಉದ್ಯಮಿ ದಯಾನಂದ ನೇತಾಳ್ಕರ್ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು. ದೈವಜ್ಞ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ರಾಘವೇಂದ್ರ ಭೂಷಣ್, ರಾಘವೇಂದ್ರ ರತ್ನಾಕರ್ ಅನ್ವೇಕರ್, ಅರ್ಪಿತಾ ಎನ್.ಶೇಟ್ ಅವರನ್ನು ಸಮ್ಮಾನಿಸಲಾಯಿತು. ಸಾಧಕರಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಪ್ರದಾನಿಸಲಾಯಿತು.
ಎಸ್.ಎಲ್.ಶೇಟ್, ಎಂ.ರಘುನಾಥ್ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪದ್ಮ ಆರ್.ಶೇಟ್ ಭಾಗವಹಿಸಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ ಎಂ.ಪ್ರಶಾಂತ್ ಶೇಟ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಂ.ಹೇಮಂತ್ ಶೇಟ್, ಎಂ.ನಿಶಾಂತ್ ಶೇಟ್ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.