

ಮಂಗಳೂರು: ಸೈಕಲ್4ಚೇಂಜ್‌ಗೆ ಅಣಿಯಾಗುತ್ತಿರುವ ಮಂಗಳೂರು ನಗರದಲ್ಲಿ ಸೈಕಲ್ ಸವಾರರು ಸಾಗುವಂತಹ ಓಣಿಗಳ ಸುಧಾರಣೆಗೆ 8 ಕೋಟಿ ರೂಪಾಯಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸ್ಮಾರ್ಟ್‌ಸಿಟಿಗೆ ಸಲ್ಲಿಕೆಯಾಗಿದೆ.
ಈಗಾಗಲೇ ಗುರುತಿಸಲಾಗಿರುವ 12 ಕಿ.ಮೀ ಉದ್ದದ ಪಥವನ್ನು ಸೈಕಲ್ ಸವಾರಿಗೆ ಯೋಗ್ಯವಾಗುವಂತೆ ಸುಧಾರಣೆಗೆ ಒಳಪಡಿಸಬೇಕಾಗುತ್ತದೆ. ಅನೇಕ ಕಡೆ ಓಣಿಗಳ ಮೇಲ್‌ಸ್ತರ ಸರಿ ಇಲ್ಲ. ಎಲ್ಲೆಲ್ಲಿ ರೋಡ್‌ರೋಲರ್ ಹೋಗುವಷ್ಟು ಅಗಲವಿದೆಯೋ, ಅಲ್ಲೆಲ್ಲ್ಲ ಡಾಂಬರ್ ಹಾಕಿ ಸರಿಪಡಿಸಬೇಕಾಗುತ್ತದೆ.
ರೋಲರ್‌ಗಳು ಹೋಗದಂತಹ ಕಿರಿದಾದ ಓಣಿಗಳಾದರೆ ಅಲ್ಲಿ ಇಂಟರ್‌ಲಾಕ್ ಹಾಕಬೇಕಾಗುತ್ತದೆ. ಅಲ್ಲದೆ ಮಳೆ ನೀರು ಈ ಓಣಿಗಳಲ್ಲೇ ಹರಿದು ಹಾಳಾಗದಂತೆ ಬದಿಯಲ್ಲಿ ‘ಸಾಸರ್ ಡ್ರೈನ್’(ಕಿರು ಚರಂಡಿ) ನಿರ್ಮಿಸಲಾಗುವುದು. ಮುಖ್ಯವಾಗಿ ಸೈಕಲಿಂಗ್ ಪಥದ ಮಾರ್ಕಿಂಗ್, ಎಲ್ಲಿಗೆ ಸಾಗುತ್ತದೆ ಎಂದು ಗುರುತಿಸುವಂತೆ ಅಲ್ಲಲ್ಲಿ ಫಲಕಗಳನ್ನೂ ಹಾಕುವುದು ಯೋಜನೆಯಲ್ಲಿ ಸೇರಿದೆ.
ಕೆಲವು ಕಡೆ ಸೇತುವೆ ದುರಸ್ತಿ, ಅಗಲಗೊಳಿಸುವುದಕ್ಕೆ ಖಾಸಗಿ ಜಾಗದ ಬಳಕೆ, ಅವರ ಆವರಣ ಗೋಡೆಯನ್ನು ಮರುನಿರ್ಮಾಣ ಮಾಡಬೇಕಾಗಿ ಬಂದರೆ ಅದರ ಖರ್ಚು ಕೂಡ ಡಿಪಿಆರ್‌ನಲ್ಲಿ ಸೇರಿದೆ.
ಸದ್ಯ ಇರುವ ಸವಾಲು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ನದ್ದು. ಇಲ್ಲಿಂದ ಯೋಜಿತ ಸೈಕಲ್ ಪಥ ಸಾಗುತ್ತದೆ, ಸದ್ಯ ಈ ದಾರಿಯನ್ನು ಜನರು ಬಳಕೆ ಮಾಡುತ್ತಿದ್ದಾರೆ, ಆದರೆ ಸೈಕಲ್ ಪಥ ನಿರ್ಮಿಸುವ ವೇಳೆ ಅದಕ್ಕೆ ರೈಲ್ವೆಯವರು ಅಡ್ಡಿಪಡಿಸುವ ಸಾಧ್ಯತೆ ಇದೆ, ಅದಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ. ಆ ಜಾಗ ಸಿಕ್ಕಿದರೆ ಪಥ ಸರಿಯಾಗಿ ಸಾಗುತ್ತದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಮಹಾಪ್ರಬಂಧಕ ಅರುಣ್ ಪ್ರಭ.
ಪ್ರವಾಸೋದ್ಯಮಕ್ಕೂ ಸೂಕ್ತ: ಈಗಿರುವ ಸೈಕಲ್ ಪಥವಲ್ಲದೆ ಪ್ರತ್ಯೇಕವಾಗಿ ಮಂಗಳೂರು ರಿವರ್‌ಫ್ರಂಟ್(ಜಲಮುಖ) ಯೋಜನೆಯಲ್ಲೂ ಸೈಕಲ್ ಪಥದ ಪ್ರಸ್ತಾಪವಿದೆ. ಅದರಂತೆ ಬರುವ ಪ್ರವಾಸಿಗರಿಗೆ ಸೈಕಲ್ ಡಾಕಿಂಗ್ ಸ್ಟೇಷನ್(ನಿಲುಗಡೆ ಸ್ಥಳ) ನಿರ್ಮಾಣ ಮಾಡುವುದೂ ಸೇರಿದೆ. ಪ್ರವಾಸಿಗರು ಬಂದು ಸೈಕಲ್ ಏರಿ ರಿವರ್‌ಫ್ರಂಟ್ ರಸ್ತೆಯ ಲೇನ್‌ನಲ್ಲಿ ಸಾಗುವುದು, ಬೀಚ್ ಇತ್ಯಾದಿ ನೋಡುವುದಕ್ಕೆ ಸಾಧ್ಯತೆಗಳಿವೆ.
ಸೈಕಲ್4ಚೇಂಜ್ ರ‌್ಯಾಲಿ ನ.1ಕ್ಕೆ: ನಗರದಲ್ಲಿ ನಾಗರಿಕರು ತಮ್ಮ ದೈನಂದಿನ ಕೆಲಸಗಳಿಗೆ ಸೈಕಲ್ ಬಳಕೆ ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 1ರಂದು ಸೈಕಲ್4 ಚೇಂಜ್ ರ‌್ಯಾಲಿಯನ್ನು ಮಂಗಳೂರು ಸ್ಮಾರ್ಟ್‌ಸಿಟಿಯಿಂದ ಹಮ್ಮಿಕೊಳ್ಳಲಾಗಿದೆ. ಮಂಗಳಾ ಕ್ರೀಡಾಂಗಣದಿಂದ ತೊಡಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು 8 ಕಿ.ಮೀ. ಕ್ರಮಿಸುವ ರ‌್ಯಾಲಿ ಇದು. ಈ ಬಗ್ಗೆ ಆಸಕ್ತರು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಇದರ ಕ್ಯೂಆರ್ ಕೋಡ್ ಇಲ್ಲಿದೆ.