ಮಗನ ಕೊಲೆಗೆ ಅಪ್ಪನಿಂದ ಪ್ರತೀಕಾರ

murder new
Published on

ಮಂಗಳೂರು: ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ನಡೆದ ಬೊಕ್ಕಪಟ್ಣ ರೌಡಿಶೀಟರ್ ಇಂದ್ರಜಿತ್(28) ಕೊಲೆಯ ಹಿಂದೆ ಪುತ್ರನನ್ನು ಹತ್ಯೆಗೈದಿರುವುದಕ್ಕೆ ಕೈಗೊಂಡ ಪ್ರತೀಕಾರವಿರುವುದು ಬೆಳಕಿಗೆ ಬಂದಿದೆ.

ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಸಿಸಿಬಿ ಹಾಗೂ ಬರ್ಕೆ ಪೊಲೀಸರು ಶನಿವಾರ ಶಕ್ತಿನಗರದ ಬಳಿ ಬಂಧಿಸಿದ್ದಾರೆ. ಬೋಳೂರು ನಿವಾಸಿಗಳಾದ ಜಗದೀಶ್ ಕರ್ಕೇರ ಯಾನೆ ತಲವಾರ್ ಜಗ್ಗ(53), ಮೋಕ್ಷಿತ್ ಕರ್ಕೇರ, ಉಲ್ಲಾಸ್ ಕಾಂಚನ್(20), ಆಶಿಕ್(23), ರಾಕೇಶ್(28), ಗೌತಮ್(25), ಕೌಶಿಕ್(25), ಶರಣ್ ಯಾನೆ ಚಾನು(19), ಫರಂಗಿಪೇಟೆ ಅರ್ಕುಳ ನಿವಾಸಿ ನಿತಿನ್ ಪೂಜಾರಿ(25) ಬಂಧಿತರು.

ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. 2014 ಮೇ 22ರಂದು ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮಂಕಿಸ್ಟಾಂಡ್ ರೌಡಿ ಗ್ಯಾಂಗ್‌ನವರು ಈ ಪ್ರಕರಣದ ಪ್ರಮುಖ ಆರೋಪಿ ಜಗದೀಶ್‌ನ ಪುತ್ರ ಸಂಜಯ್ ಯಾನೆ ವರುಣ್ ಎಂಬಾತನನ್ನು ಹೊಯ್ಗೆಬೈಲ್‌ನ ದೈವಸ್ಥಾನವೊಂದರ ಸಮೀಪ ಭೀಕರವಾಗಿ ಹತ್ಯೆಗೈದಿದ್ದರು. ಅದರ ಪ್ರತೀಕಾರ ತೀರಿಸಿಕೊಳ್ಳಲು ಮಂಕಿಸ್ಟಾಂಡ್ ರೌಡಿ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಇಂದ್ರಜಿತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಇಂದ್ರಜಿತ್ ರಾತ್ರಿ ವೇಳೆಯಲ್ಲಿ ತಂಗುತ್ತಿದ್ದ ಕರ್ನಲ್ ಗಾರ್ಡನ್ ಬೋಟ್ ಯಾರ್ಡ್‌ನಲ್ಲಿ ಆರೋಪಿಗಳು ಪೂರ್ವ ಯೋಜಿತ ಸಂಚಿನಂತೆ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.

ಬರ್ಕೆ ಪೊಲೀಸರು ತನಿಖೆ ಆರಂಭಿಸಿ ಪಿಐ ಜ್ಯೋತಿರ್ಲಿಂಗ ಹೊನಕಟ್ಟಿ ನೇತೃತ್ವದಲ್ಲಿ ಹಲವರನ್ನು ವಿಚಾರಣೆ ನಡೆಸಿದ್ದು, ಶಕ್ತಿನಗರ ಸಮೀಪದ ರಾಜೇಶ್ವರಿ ನಗರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net