

ಮಂಗಳೂರು: ಅಮೇರಿಕವನ್ನು ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ನಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಆರೋಪಿಸಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಮಂಗಳೂರು ನಗರ ದಕ್ಷಿಣ ಸಮ್ಮೇಳನವನ್ನು ಭಾನುವಾರ ಕೊಟ್ಟಾರ ಚೌಕಿಯ ವಿ.ಎಸ್. ಕೆ ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು.
ಜಗತ್ತು ಆತಂಕಕಾರಿ ಸ್ಥಿತಿಯಲ್ಲಿದೆ. ಒಂದು ವರ್ಷದಿಂದ ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ ನಡೆಯುತ್ತಿದೆ. ಇಸ್ರೇಲ್ ನರಮೇಧದಿಂದ 48,000 ಮಂದಿ ಸಾವನ್ನಪ್ಪಿದ್ದಾರೆ, ಆ ಪೈಕಿ 16,000 ಮಂದಿ ಮಹಿಳೆಯರು ಮತ್ತು ಮಕ್ಕಳು ಆಗಿದ್ದಾರೆ. ಈ ಭೀಕರ ಕ್ರೂರತೆಯನ್ನು ಸಿಪಿಐಎಂ ಖಂಡಿಸುತ್ತದೆ ಎಂದು ಹೇಳಿದರು.
2014ರಲ್ಲಿ ಅಚ್ಚೆ ದಿನ್ ತರುವ, ರೈತರ ಆದಾಯ ದ್ವಿಗುಣಗೊಳಿಸುವ, ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದರು. ಆದರೆ ಈಗ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೂ ಕೂಡ ಭರವಸೆಯನ್ನು ಪೂರೈಸಿಲ್ಲ. ಬದಲಾಗಿ ನೆಲಜಲವನ್ನು ಅಂಬಾನಿ ಅದಾನಿಗೆ ಧಾರೆ ಎರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದರೂ ಕೂಡ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಇಂಡಿಯಾ ಮೈತ್ರಿಕೂಟ ಬಿಜೆಪಿಗೆ ಮುಖಭಂಗವಾಗುವಂತೆ ಚುನಾವಣಾ ಪ್ರದರ್ಶನ ತೋರಿದೆ. ಈ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟವನ್ನು ಸ್ಥಾಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಕಾಂಗ್ರೆಸ್ ಅಲ್ಲ ಸಿಪಿಐಎಂ ಎಂಬುದು ನಮಗೆ ತಿಳಿದಿರಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ನಗರ ಸಮಿತಿ ಸದಸ್ಯರಾದ ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು , ಹಿರಿಯ ಸಂಗಾತಿ ಜಯರಾಮ್ ಮಣಿಯಾಣಿ , ಸ್ವಾಗತ ಸಮಿತಿ ಗೌರವಾಧ್ಯಕ್ಷರು ಪದ್ಮನಾಭ ಕೋಟ್ಯಾನ್, ಅಧ್ಯಕ್ಷ ಪ್ರಕಾಶ್ ಕೊಟ್ಟಾರಿ, ಕಾರ್ಯಾಧ್ಯಕ್ಷ ಅಶೋಕ್ ಶ್ರೀಯಾನ್, ಸಂಘಟನಾ ಕಾರ್ಯದರ್ಶಿ ಮನೋಜ್ ಕುಲಾಲ್, ಪ್ರ.ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ಖಜಾಂಚಿ ರಾಜೇಶ್ ಉರ್ವಸ್ಟೋರ್ ಉಪಸ್ಥಿತರಿದ್ದರು.
ಸಿಪಿಐಎಂ ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು. ರಾಜೇಶ್ ಉರ್ವಸ್ಟೋರ್ ವಂದಿಸಿದರು.