ಹೊರೆ ತಗ್ಗಿಸಲಿದೆ ಏರಿಯಾ ಸಭಾ

mangalore corporation new
Published on

ಶ್ರವಣ್ ಕುಮಾರ್ ನಾಳ ಮಂಗಳೂರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಕಾರ್ಪೊರೇಟರ್‌ಗಳ ಮೇಲಿನ ಹೊರೆ ತಗ್ಗಿಸಲು ಏರಿಯಾ ಸಭಾ ರಚಿಸಲು ತೀರ್ಮಾನಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಕಮಿಟಿ ಈಗಾಗಲೇ ಅಸ್ತಿತ್ವದಲ್ಲಿದೆ. ಇದೀಗ ವಾರ್ಡ್‌ಗಳನ್ನು ಎರಡು ಭಾಗವಾಗಿ ವಿಭಜಿಸಿ ಏರಿಯಾ ಸಭಾ ರಚನೆಯಾಗಲಿದೆ. ನಗರದ 60 ವಾರ್ಡ್‌ಗಳಲ್ಲೂ ಅಸ್ತಿತ್ವಕ್ಕೆ ಬರಲಿದ್ದು, 59 ವಾರ್ಡ್‌ಗಳಲ್ಲಿ ಎರಡು ಮತ್ತು ಒಂದು ವಾರ್ಡ್‌ನಲ್ಲಿ ಮೂರು ಸಭಾದಂತೆ ಒಟ್ಟು 121 ಏರಿಯಾ ಸಭಾಕ್ಕೆ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿ ಕಾರ್ಯಗತಗೊಳಿಸುವ ಮಹತ್ವದ ನಿರ್ಧಾರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ. ಇತ್ತೀಚೆಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಕಾರ್ಯಸೂಚಿ ಮಂಡನೆಯಾಗಿ ಅನುಮೋದನೆ ಪಡೆದಿದೆ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಅಧಿನಿಯಮ 1976 ಅಧ್ಯಾಯ-3ಎ ಅನ್ವಯ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ಗಳಿಗೆ ಸಂಬಂಧಿಸಿ ನಿಯಮಾನುಸಾರ ಏರಿಯಾ ಸಭೆ ರಚಿಸಬೇಕಾಗಿದೆ. ಅದರಂತೆ ಸರ್ಕಾರದ ಆದೇಶದಂತೆ 2019ರಲ್ಲಿ ಮಂಗಳೂರು ಪಾಲಿಕೆಯ 60 ವಾರ್ಡ್‌ಗಳಿಗೆ 121 ಏರಿಯಾ ಸಭೆ ರಚಿಸಲಾಗಿದೆ. ಮಹಾನಗರ ಪಾಲಿಕೆಯ ಪ್ರತಿಯೊಬ್ಬ ಸದಸ್ಯರೂ ತಮ್ಮ ವಾರ್ಡ್‌ಗೆ ಏರಿಯಾ ಸಭಾ ಪ್ರತಿನಿಧಿಯನ್ನು ಶಿಾರಸು ಮಾಡಿ ಆ ಸದಸ್ಯರನ್ನು ಪಾಲಿಕೆ ಪರಿಷತ್ತಿನಲ್ಲಿ ಅಂಗೀಕಾರ ಪಡೆಯಬೇಕಿದೆ.

ವಾರ್ಡ್ ಸಮಿತಿ ನೋಡೆಲ್ ಅಧಿಕಾರಿ ಜವಾಬ್ದಾರಿ
ಮಂಗಳೂರಿನ 60 ವಾರ್ಡ್‌ಗಳಲ್ಲೂ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇಲ್ಲಿ ನಡೆಯುವ ಸಭೆ ಮಹತ್ವ ಪಡೆದುಕೊಳ್ಳಲಿದೆ. ವಾರ್ಡ್ ಸಮಿತಿಯಲ್ಲಿ ವಾರ್ಡ್‌ಗೆ ಒಬ್ಬರಂತೆ ಅಧ್ಯಕ್ಷರು ಇರುವ ರೀತಿಯಲ್ಲಿ ಏರಿಯಾ ಸಭಾದಲ್ಲಿ ಪ್ರತಿನಿಧಿಯನ್ನು ಆರಿಸಲಾಗುತ್ತದೆ. ಆಯಾ ಪ್ರದೇಶದ ಒಬ್ಬರು ಪಾಲಿಕೆ ಮತದಾರನನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ ವಾರ್ಡ್ ಸಮಿತಿಯ ಕಾರ್ಯದರ್ಶಿಗಳು ಇಲ್ಲಿ ನೋಡೆಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸ್ಥಳೀಯ ಸಮಸ್ಯೆಗೆ ಪರಿಹಾರ
ನಿಗದಿತವಾಗಿ ಏರಿಯಾ ಸಭಾ ಸಭೆ ನಡೆಯಲಿದ್ದು, ಅಲ್ಲಿ ಮತದಾರರಿಗೆ ಸಮಸ್ಯೆಗಳ ಬಗ್ಗೆ, ಸಲಹೆ ನೀಡಲು ಅವಕಾಶವಿದೆ. ಸಭೆಯ ನಡಾವಳಿಗಳನ್ನು ಅಲ್ಲಿ ರೆಕಾರ್ಡ್ ಮಾಡಲಾಗುತ್ತದೆ. ಅದರಲ್ಲಿ ತೆಗೆದುಕೊಳ್ಳುವ ನಿರ್ಧಾರ, ತೀರ್ಮಾನಗಳು ವಾರ್ಡ್ ಕಮಿಟಿಗೆ ಬರುತ್ತವೆ. ಆಯಾ ವಿಷಯದ ಬಗ್ಗೆ ಅಲ್ಲಿ ನಿರ್ಣಯ ಕೈಗೊಂಡು ಬಳಿಕ ಆಯುಕ್ತರ ಮುಖೇನ ಪಾಲಿಕೆಗೆ ಹೋಗುತ್ತದೆ. ನಗರಾಡಳಿತವನ್ನು ವಿಕೇಂದ್ರೀಕರಿಸಿ ವಾರ್ಡ್‌ನ ಏರಿಯಾವನ್ನು ಗಮನದಲ್ಲಿಟ್ಟುಗೊಂಡು ಜನರ ಸಹಭಾಗಿತ್ವದೊಂದಿಗೆ ಆಯಾ ಏರಿಯಾದ ಪಾರದರ್ಶಕ ಆಡಳಿತ, ಗುಣಮಟ್ಟದ ಕೆಲಸ ಸಹಿತ ಅಭಿವೃದ್ಧಿ ನಿಟ್ಟಿನಲ್ಲಿ ರಚನೆಗೊಂಡ ಪ್ರಕ್ರಿಯೆಯೇ ಏರಿಯಾ ಸಭಾ. ಪಾಲಿಕೆ ವ್ಯಾಪ್ತಿಯನ್ನು ವಾರ್ಡ್ ಬದಲು ಏರಿಯಾ ಮಟ್ಟದಲ್ಲೇ ಬಲಪಡಿಸುವುದು ಇದರ ಕೆಲಸ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಪ್ರಾಥಮಿಕ ಮಟ್ಟದಿಂದಲೇ ಯೋಜನೆ ಅನುಷ್ಠಾನಗೊಳಿಸಲು ಸಹಕಾರ ನೀಡುವುದು, ಏರಿಯಾದ ಯೋಜನೆ-ವಿವಿಧ ಸಹಾಯಧನಗಳಿಗೆ ಲಾನುಭವಿಗಳನ್ನು ಗುರುತಿಸುವುದು, ಕುಂದುಕೊರತೆ ನಿವಾರಣೆ ಇದರ ಕೆಲಸ.

ಸರ್ಕಾರದ ಆದೇಶದಂತೆ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ ಏರಿಯಾ ಸಭಾಗಳಿಗೆ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿ ಕಾರ್ಯಗತಗೊಳಿಸುವ ಕುರಿತ ತೀರ್ಮಾನಕ್ಕೆ ಪಾಲಿಕೆಯ ಪರಿಷತ್ತಿಗೆ ಕಾರ್ಯಸೂಚಿ ಮಂಡಿಸಲಾಗಿದೆ. 121 ಏರಿಯಾ ಸಭಾಕ್ಕೆ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿ ಕಾರ್ಯಗತಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಜಯಾನಂದ ಅಂಚನ್, ಮಂಗಳೂರು ಮೇಯರ್

ಎಂಎನ್‌ಜಿ-16ಆ. ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net