ಕರೊನಾಕ್ಕೆ 9ನೇ ಬಲಿ, ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದ ವೃದ್ಧ, ಬಟ್ಟೆ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು

dhakke
Published on

ಮಂಗಳೂರು: ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧ ಮಂಗಳವಾರ ಮೃತಪಟ್ಟಿದ್ದಾರೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ 9ನೇ ಕೋವಿಡ್ ಸಾವು ಪ್ರಕರಣ ದಾಖಲಾಗಿದೆ. ಇವರು 7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು.

ದ.ಕ ಜಿಲ್ಲೆಯಲ್ಲಿ ಮಂಗಳವಾರ ತೀವ್ರ ಉಸಿರಾಟ ತೊಂದರೆಯ ಇಬ್ಬರು, ಇನ್‌ಫ್ಲುಯೆಂಜಾ ಮಾದರಿ ತೊಂದರೆಯ ಓರ್ವ ಸೇರಿದಂತೆ ಎಂಟು ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಕುವೈತ್‌ನಿಂದ ಬಂದ ಒಬ್ಬರಿಗೆ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿದ್ದರೆ, ನಾಲ್ಕು ಮಂದಿಗೆ ಓರ್ವ ರೋಗಿಯಿಂದ ಕರೊನಾ ತಗುಲಿದೆ.

ಮಂಗಳವಾರ ಒಟ್ಟು 57 ಮಂದಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು 286 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬಂದಿರುವ 142ರಲ್ಲಿ 8 ಪಾಸಿಟಿವ್ ಹಾಗೂ 134 ನೆಗೆಟಿವ್. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 443ಕ್ಕೆ ಏರಿದ್ದು ಸಕ್ರಿಯ ಪ್ರಕರಣಗಳು 188.

ಬಾಣಂತಿ, ಶಿಶು ಸಹಿತ 7 ಮಂದಿ ಬಿಡುಗಡೆ: ಕೋವಿಡ್ ಪಾಸಿಟಿವ್ ಬಂದು ಜೂನ್ 11ರಂದು ದಾಖಲಿಸಲಾದ ಗರ್ಭಿಣಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು ಆಕೆ ಹಾಗೂ ಶಿಶುವಿಗೆ ಬಳಿಕ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಅವರೂ ಸೇರಿದಂತೆ ಒಟ್ಟು 7ಮಂದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಕರೊನಾ ಪಾಸಿಟಿವ್ ಗರ್ಭಿಣಿಗೆ ಸಹಜ ಹೆರಿಗೆ: ಕರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಹೆರಿಗೆಯಾದ ಬಳಿಕ ವರದಿ ನೆಗೆಟಿವ್ ಬಂದ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಪಾಸಿಟಿವ್ ಗರ್ಭಿಣಿಗೆ ಮಂಗಳೂರಿನಲ್ಲಿ ಮಂಗಳವಾರ ಮುಂಜಾನೆ ಸಹಜ ಹೆರಿಗೆಯಾಗಿದೆ. ಕರೊನಾ ಸೋಂಕಿತ ಗರ್ಭಿಣಿಗೆ ಸಹಜ ಹೆರಿಗೆಯಾದ ಜಿಲ್ಲೆಯ ಮೊದಲ ಪ್ರಕರಣವಿದು. ಇದೀಗ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಹಿಳೆ 28 ವರ್ಷದವರಾಗಿದ್ದು, ಸೋಮವಾರ ರಾತ್ರಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪ್ರಸೂತಿ ತಜ್ಞರ ಉಪಸ್ಥಿತಿಯಲ್ಲಿ ಸಹಜ ಹೆರಿಗೆಯಾಗಿ ಹೆಣ್ಣುಮಗು ಜನಿಸಿದೆ. ಮಗು 3.04 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ.

ಬಟ್ಟೆ ಅಂಗಡಿಯಾತನ ಕುಟುಂಬಕ್ಕೂ ಸೋಂಕು: ಭಾನುವಾರ ಕೋವಿಡ್ ಪಾಸಿಟಿವ್ ಆಗಿದ್ದ ಎಕ್ಕೂರಿನ ಮೀನು ವ್ಯಾಪಾರಿಯಿಂದ ಹಲವರಿಗೆ ಸೋಂಕು ತಗಲಿರುವ ಶಂಕೆ ಇದೆ. ಈ ಆತಂಕ ಮಧ್ಯೆಯೇ ನಗರದ ಮಾರ್ಕೆಟ್ ರಸ್ತೆಯ ಬಟ್ಟೆ ಅಂಗಡಿಯ ಯುವಕರೊಬ್ಬರಿಗೆ ಎರಡು ದಿನ ಹಿಂದೆ ಕರೊನಾ ದೃಢಪಟ್ಟಿತ್ತು. ಬಟ್ಟೆ ವ್ಯಾಪಾರಕ್ಕಾಗಿ ಓಡಾಡುವ ಸಹವರ್ತಿಗಳಿಂದಾಗಿ ಅವರಿಗೆ ತಗಲಿದ್ದು, ಅವರ ಸಂಪರ್ಕದಿಂದ ಸೋಮವಾರ ಅವರ ಕುಟುಂಬದ ನಾಲ್ವರಲ್ಲೂ ಕರೊನಾ ದೃಢಪಟ್ಟಿದೆ. ಇನ್ನಿಬ್ಬರಿಗೆ ನೆಗೆಟಿವ್ ಬಂದಿದೆ. ಆದರೆ ಅವರ ಸಂಪರ್ಕಕ್ಕೆ ಎಷ್ಟು ಮಂದಿ ಗ್ರಾಹಕರು ಬಂದಿದ್ದಾರೆ ಎನ್ನುವುದು ತಿಳಿದಿಲ್ಲ.

ತಮಿಳುನಾಡಿನವರಿಂದ ಸೋಂಕು?: ಈ ನಡುವೆ, ತಮಿಳುನಾಡಿನಿಂದ ಬಂದು ಮಂಗಳೂರು ಬಂದರು ದಕ್ಕೆಯಲ್ಲಿ ಮೀನು ಮಾರಾಟ ಮಾಡುವವರಿಂದ ಕೆಲವೊಂದು ಮಂದಿಗೆ ಕರೊನಾ ಹರಡಿದ ಶಂಕೆ ವ್ಯಕ್ತವಾಗಿದೆ. ಎಕ್ಕೂರಿನ ಮೀನು ವ್ಯಾಪಾರಿ ಯುವಕ ಧಕ್ಕೆಯಿಂದ ಮೀನು ಖರೀದಿಸಲು ಹೋಗಿದ್ದು, ಅವರಿಗೂ ಈ ತಮಿಳುನಾಡಿನವರಿಂದ ತಗಲಿರಬಹುದು ಎನ್ನಲಾಗುತ್ತಿದೆ. ಈ ಸಂಪರ್ಕದಲ್ಲಿ ನಾಲ್ಕಾರು ಕರೊನಾ ಪಾಸಿಟಿವ್ ಕೇಸುಗಳು ದೃಢಪಟ್ಟಿದ್ದು, ಅದನ್ನು ಅಧಿಕೃತವಾಗಿ ಇಲಾಖೆ ಬುಧವಾರ ಪ್ರಕಟಿಸುವ ನಿರೀಕ್ಷೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂದರು ದಕ್ಕೆಯನ್ನು ಅಧಿಕಾರಿಗಳು ಮಂಗಳವಾರ ಸೀಲ್‌ಡೌನ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net