

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ದತಿ ಬದಲು ನೇರ ಪಾವತಿ ಜಾರಿಗೊಳಿಸಲು ವಿಕಾಸ ಸೌಧದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ನೌಕರರ ಸಂಘದ ಪ್ರತಿನಿಧಿಗಳು, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕಾಡು ಅವರು, ಕಾರ್ಮಿಕರಿಗೆ ಇದೊಂದು ಸಿಹಿ ಸುದ್ದಿಯಾಗಿದೆ. ಸಂಘದ ದೀರ್ಘ ಕಾಲದ ಹೋರಾಟಕ್ಕೆ ಫಲ ದೊರೆತಿದೆ ಎಂದು ಹೇಳಿದರು.
ಅನಗತ್ಯವಾಗಿ ಏಜೆನ್ಸಿಗಳ ಶೋಷಣೆಗೆ ಸಿಲುಕಿಸುವ ಗುತ್ತಿಗೆ ಪದ್ದತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ತರಲು ಅಗತ್ಯ ಪ್ರಸ್ತಾವನೆ ಸಿದ್ದಪಡಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಅವರಿಗೆ ಸಚಿವರು ನೀಡಿರುವ ಸೂಚನೆಗೆ ಸಂಘದ ಪ್ರತಿನಿಧಿಗಳು ಸಭೆಯಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಪ್ರಸ್ತಾವನೆ ಹೆಸರಿನಲ್ಲಿ ಕಾಲಹರಣ ಬೇಡ. ಪ್ರಸ್ತಾವಿತ ವಿಷಯ ಸಂಬಂಧಿಸಿದ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿದೆ. ಹೊಗುತ್ತಿಗೆ ನೌಕರರ ಮಾಹಿತಿ ನಗರಾಭಿವೃದ್ಧಿ ಇಲಾಖೆಯ ಬಳಿ ಇದೆ. ಆದ್ದರಿಂದ ನೇರಪಾವತಿ ಪ್ರಕ್ರಿಯೆಯನ್ನು ವಿಳಂಬಗೊಳಿಸದೆ ತಕ್ಷಣ ಜಾರಿಗೊಳಿಸುವಂತೆ ನೌಕರರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ಅವರು ವಿವರಿಸಿದರು.
ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣ ಗೌಡ, ಪೌರಾಡಳಿತ ಇಲಾಖೆಯ ನಿರ್ದೇಶಕಿ ಎನ್.ಮಂಜುಶ್ರೀ ಮುಂತಾದವರು ಭಾಗವಹಿಸಿದ್ದರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಕಿರಣ್ ದೇವಾಡಿಗ, ಕಿರಣ್ ನಾಯ್ಕ, ಬಾಲಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.