

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮದಿನಾಚರಿಸಲಾಯಿತು.
ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳ ಸಂಭ್ರಮದ ಕಾರ್ಯಕ್ರಮದ ಪ್ರಯುಕ್ತ ನಗರದ ಲಾಲ್ ಭಾಗ್ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆಗೈದು ಮಣ್ಣಗುಡ್ಡೆ ಗಾಂಧಿ ಪಾರ್ಕ್ ವರೆಗೆ ಪಾದಯಾತ್ರೆಯಲ್ಲಿ ಬಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ಮಾತನಾಡಿ, ಗಾಂಧೀಜಿ ಕೇವಲ ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ನಾಯಕರಾಗಿದ್ದರು. ಅವರು ಸತ್ಯ, ಅಹಿಂಸಾ, ಶಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಅವರ ಧೈರ್ಯ, ನಾಯಕತ್ವ, ವ್ಯಕ್ತಿತ್ವ ಮತ್ತು ಸರಳತೆ ಜಗತ್ತಿಗೆ ಮಾದರಿ. ಆದ್ದರಿಂದಲೇ ಅವರನ್ನು ರಾಷ್ಟ್ರಪಿತ ಎಂದೇ ಕರೆಯಲಾಯಿತು ಎಂದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಅಬ್ದುಲ್ ರವೂಫ್ ಮೊದಲಾದವರಿದ್ದರು.