

ಹುಬ್ಬಳ್ಳಿ : ಇಲ್ಲಿಯ ಕೆಎಂಸಿಆರ್ಐ ಮೈದಾನದಲ್ಲಿ ಆಯೋಜಿಸಿದ್ದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್)ದ ಅಂತರ್ ಕಾಲೇಜ್ ಅಥ್ಲೆಟಿಕ್ ಮೀಟ್-2024ರಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪುರುಷ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ಸ್ನ ಸೂರ್ಯ ಪಿ., ಮಹಿಳಾ ವಿಭಾಗದಲ್ಲಿ ಶಿವಮೊಗ್ಗದ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಸಾಕ್ಷಿ ಎಸ್.ಡಿ. ಪಡೆದುಕೊಂಡರು.
ಟೀಮ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಪುರುಷ ವಿಭಾಗದಲ್ಲಿ ಮಂಡ್ಯದ ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಮಂಗಳೂರಿನ ಅಥೇನ್ ಕಾಲೇಜ್ ಆಫ್ ನರ್ಸಿಂಗ್ ತಂಡ ತನ್ನದಾಗಿಸಿಕೊಂಡಿತು.
ಶುಕ್ರವಾರ ಏರ್ಪಡಿಸಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ಪೂನಮ್ ಬೆಳ್ಳಿಯಪ್ಪ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವೇ ಹೊರತು, ಸೋಲು-ಗೆಲುವಿನ ಫಲಿತಾಂಶ ಅಲ್ಲ ಎಂದರು.
ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಗೆಲ್ಲಲು ನಿರಂತರ ಹಾಗೂ ಕಠಿಣ ಪರಿಶ್ರಮ ಅಳವಡಿಸಿಕೊಳ್ಳಬೇಕು. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡೆ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕೆಲವು ಬಾರಿ ಗೆಲುವು ಕಾಣುವುದು ತಡವಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮಗೆ ನೀವೇ ಪ್ರೇರಣೆ ತಂದುಕೊಳ್ಳಬೇಕು. ಸತತ ಸೋಲುಗಳಿಂದ ಎದೆಗುಂದದೇ, ಗೆಲುವಿಗಾಗಿ ಪ್ರಯತ್ನಿಸಬೇಕು. ನಿಮ್ಮ ಜೀವನಕ್ಕೆ ನೀವೇ ಜವಾಬ್ದಾರರು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಂಸಿಆರ್ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ಭವಿಷ್ಯದ ವೈದ್ಯರಾಗುವ ವಿದ್ಯಾರ್ಥಿಗಳು ಸೋಲು-ಗೆಲುವುಗಳಿಗೆ ಎದೆಗುಂದಬಾರದು. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿ, ಡಾ. ಕೆ.ಎಫ್. ಕಮ್ಮಾರ, ಡಾ. ರಾಜಶೇಖರ ದುಂಡರಡ್ಡಿ, ಡಾ. ಈಶ್ವರ ಹಸಬಿ, ಡಾ. ರಾಜಶಂಕರ, ಡಾ. ರಮೇಶ ಕಳಸದ, ಡಾ. ಅಂಜನಾ ಧವಳೇಶ್ವರ, ಉದಯಕುಮಾರ ಆರ್.ಎಚ್. ಅರುಣ ಗೌಡೆಳ್ಳರ, ಡಾ. ಕ್ರಾಂತಿಕಿರಣ, ಡಾ. ಎಂ.ಜೆ. ಜೀವಣ್ಣವರ, ಡಾ. ಸೋಮಶೇಖರ ಕಲಮಠ ಹಾಗೂ ಇತರರು ಇದ್ದರು.