

ಮಂಗಳೂರು: ಮೊದಲ ಮಳೆಗೆ ನಗರ ನರಕ ದರ್ಶನ ತೋರಿಸಿಕೊಟ್ಟಿದೆ. ಪಾಲಿಕೆ, ಜಿಲ್ಲಾಡಳಿತ ಎಷ್ಟು ಅಲರ್ಟ್ ಆಗಿತ್ತು ಎಂಬುದನ್ನು ಆರಂಭದ ಸಾಧಾರಣ ಮಳೆಯೇ ತೋರಿಸಿಕೊಟ್ಟಿದೆ. ಇನ್ನು ಮಳೆಯ ಆರ್ಭಟ ಶುರುವಾದರೆ ಪರಿಸ್ಥಿತಿ ಇನ್ನೂ ಡೇಂಜರ್.
ನಗರದ ಲೇಡಿಹಿಲ್ ಬಳಿ ನಾಲ್ಕು ಕಡೆ ಕಾಂಕ್ರಿಟ್ ರಸ್ತೆ ಅಗೆದು ಎರಡು ತಿಂಗಳುಗಳೇ ಕಳೆದಿದೆ. ಆದರೆ ಇದುವರೆಗೂ ಅದನ್ನು ಮುಚ್ಚುವ ಕಾರ್ಯ ಆಗಿಲ್ಲ. ಗುಂಡಿ ತೋಡಿದವರು ಮಣ್ಣು ತುಂಬಿಸಿ ಕೈ ತೊಳೆದುಕೊಂಡಿದ್ದಾರೆ. ಈಗ ಮಳೆಯಿಂದಾಗಿ ಗುಂಡಿಗೆ ತುಂಬಿಸಿರುವ ಮಣ್ಣು ರಸ್ತೆ ಪಾಲಾಗುತ್ತಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ದ್ವಿಚಕ್ರ ವಾಹನ ಸವಾರರಿಗಂತೂ ಈ ಕೆಸರು ಗುಂಡಿ ಕಂಟಕಪ್ರಾಯವಾಗಿದೆ. ಸದ್ಯ ಎರಡು ಬ್ಯಾರಿಕೇಡ್ ಅಡ್ಡವಿಟ್ಟು ಸಂಭಾವ್ಯ ಅಪಘಾತ ತಪ್ಪಿಸಲಾಗಿದೆ. ಮೊದಲ ಮಳೆ ಅಲ್ಲಿನ ಸ್ಥಿತಿಯನ್ನು ಅನಾವರಣಗೊಳಿಸಿದೆ. ಇಲ್ಲಿರುವ ಚಿತ್ರಣ ವಾಸ್ತವವನ್ನು ತೆರೆದಿಡುತ್ತಿದೆ. ಅಪರ ಜಿಲ್ಲಾಧಿಕಾರಿಗಳು ಈ ರಸ್ತೆಯ ಪಕ್ಕದಲ್ಲೇ ವಾಸ್ತವ್ಯವಿದ್ದಾರೆ. ಪಾಲಿಕೆ ಅಧಿಕಾರಿಗಳು ದಿನಾ ಓಡಾಡುವ ರಸ್ತೆಯಿದು. ಆದರೆ ಕಟ್ಟಿಂಗ್‌ಗೊಳಗಾದ ರಸ್ತೆ ಮಾತ್ರ ಇನ್ನು ಕಾಂಕ್ರಿಟ್ ಭಾಗ್ಯ ಕಂಡಿಲ್ಲ.
ಆದೇಶಕ್ಕೆ ಕಿಮ್ಮತ್ತಿಲ್ಲವೇ?
ಪಾಲಿಕೆ ಆಯುಕ್ತ ಕೆ.ಚನ್ನಬಸಪ್ಪ ಅವರು ವಾರದ ಹಿಂದೆ ಇನ್ನು ಮಳೆಗಾಲದಲ್ಲಿ ರೋಡ್ ಕಟ್ಟಿಂಗ್ ಮಾಡಬಾರದು ಎಂದು ಆದೇಶ ಹೊರಡಿಸಿದ್ದರು. ಆದರೆ ಭಾನುವಾರದಿಂದ ಬಿಜೈ ರಸ್ತೆಯುದ್ದಕ್ಕೂ ರಸ್ತೆ ಅಗೆತ ಆರಂಭವಾಗಿದೆ. ಕೆಲವೆಡೆ ಒಳಚರಂಡಿ ಸರಿಪಡಿಸುವ ಕಾರಣದಿಂದ ಅಗೆಯುವ ಕಾರ್ಯ ಮುಂದುವರಿದಿದೆ. ಈ ಮುಖ್ಯ ರಸ್ತೆಯ 10ಕ್ಕಿಂತಲೂ ಅಧಿಕ ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ. ಮಳೆ ನೀರು, ಮಣ್ಣು ನೇರವಾಗಿ ಅಗೆದಿಡಲಾದ ಗುಂಡಿಯೊಳಗೆ ಹೋಗುತ್ತಿದೆ. ಅಗೆದು ರಸ್ತೆಯ ಕಾಂಕ್ರೀಟು ತುಂಡುಗಳನ್ನು ಅಪಾಯಕಾರಿಯಾಗಿ ಹಾಕಲಾಗಿದೆ. ದ್ವಿಚಕ್ರ ವಾಹನ ಸವಾರರಿಗಂತು ಅಪಾಯಕಾರಿಯಾಗಿದೆ. ಇನ್ನು ಸದ್ಯಕ್ಕಂತೂ ಅಗೆದ ರಸ್ತೆ ಸರಿಪಡಿಸಲು ಹೋಗುವುದಿಲ್ಲ.
ಮೊದಲ ಮಳೆಗೇ ಹೀಗಾದರೆ ಮುಂದೆ ಹೇಗೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ನಗರದ ಬೆಂದೂರ್‌ವೆಲ್, ಕಂಕನಾಡಿ, ಫಳ್ನೀರ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಅರೆಬರೆ ಕಾಮಗಾರಿಗಳು ಪ್ರಯಾಣಿಕರಿಗೆ ಸಂಕಷ್ಟ ತಂದಿಟ್ಟಿದೆ. ಪಾಲಿಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕಾಗಿದೆ.
ರಾತ್ರಿ ಸಂಚಾರ ಡೇಂಜರ್ !
ನಗರದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವುದು ಒಳಿತು. ರಸ್ತೆಯಲ್ಲಿನ ಗುಂಡಿಗಳ ಅರಿವಿರದೆ ವಾಹನ ಚಲಾಯಿಸಿದರೆ ಅಪಘಾತಕ್ಕೆಈಡಾಗುವುದು ಖಂಡಿತ. ಮೊದಲೇ ನಗರದ ಬಹುತೇಕ ರಸ್ತೆಗಳು ಪಾಕಿರ್ಂಗ್ ಸ್ಥಳವಾಗಿಬಿಟ್ಟಿವೆ. ಇನ್ನೊಂದೆಡೆ ಹೊಂಡಗುಂಡಿಗಳ ರಸ್ತೆ ಡೇಂಜರ್ ಆಗಿ ಪರಿಣಮಿಸಿದೆ. ರಾತ್ರಿ ವೇಳೆಯಂತೂ ವಾಹನ ಸವಾರು ಅಲರ್ಟ್ ಆಗಿಯೇ ವಾಹನ ಚಲಾಯಿಸಬೇಕು. ರಸ್ತೆಗಳಲ್ಲಿ ಮಣ್ಣು, ಮರಳು ನಿಂತಿದ್ದು, ವಾಹನಗಳು ಸ್ಕಿಡ್ ಆಗುವ ಸಾಧ್ಯತೆ ಇದೆ. ನಿಧಾನವಾಗಿ ವಾಹನ ಚಾಲನೆ ಮಾಡುವುದು ಒಳಿತು.
ಒಳಚರಂಡಿ ಸಮಸ್ಯೆ ಎದುರಾದಾಗ ಅದನ್ನು ತುರ್ತಾಗಿ ಸರಿಪಡಿಸಲು ಅವಶ್ಯ ಇರುವಲ್ಲಿ ರೋಡ್ ಕಟ್ಟಿಂಗ್ ಮಾಡುವುದು ಅನಿವಾರ್ಯ. ಈ ಹಿಂದೆ ರೋಡ್ ಕಟ್ಟಿಂಗ್ ಮಾಡಿದಲ್ಲಿ ಮುಚ್ಚಲು ಬಾಕಿ ಇರುವುದನ್ನು ತಕ್ಷಣ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
ಜಯಾನಂದ ಅಂಚನ್
ಮೇಯರ್