

ಮಂಗಳೂರು: ‘ಝೀಬ್ರಾ ಕ್ರಾಸ್’ಗಳಿರುವುದು ಪಾದಚಾರಿಗಳಿಗೆ ರಸ್ತೆ ದಾಟಲು. ಎಲ್ಲೆಂದರಲ್ಲಿ ರಸ್ತೆ ದಾಟುವವರ ಮೇಲೆ ಬೆಂಗಳೂರು ಹಾಗೂ ಇತರ ಕೆಲವು ನಗರಗಳಲ್ಲಿ ದಂಡ ವಿಧಿಸಲಾಗುತ್ತಿದ್ದು, ಮಂಗಳೂರಿನಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ತಿಳಿಸಿದ್ದಾರೆ.
ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಶನಿವಾರದಂದು ನಗರದ ಟಿಎಂಎ ಪೈ ಕನ್‌ವೆನ್ಷನ್ ಸಭಾಂಗಣದಲ್ಲಿ ಜರಗಿದ ಸಂಚಾರ ಸಂಪರ್ಕ ದಿವಸದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಆಟೋರಿಕ್ಷಾ ಚಾಲಕರ ಸಂಘದ ಅರುಣ್ ಕುಮಾರ್ ಮಾತನಾಡಿ, ಅಪಘಾತ ನಡೆಸಿ ನಿಲ್ಲಿಸದೆ ಹೋದರೆ, ಅವರ ವಾಹನ ನಂಬರ್ ಪತ್ತೆಗೆ ಸಿಸಿ ಕ್ಯಾಮರಾಗಳ ಗುಣಮಟ್ಟ ಹೆಚ್ಚಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಅವರು, ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸ್ವಯಂ ಚಾಲಿತವಾಗಿ ವಾಹನಗಳ ನಂಬರ್‌ಪ್ಲೇಟ್ ಸ್ಪಷ್ಟವಾಗಿ ಗುರುತಿಸುವ, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದಿರುವುದು ಮೊದಲಾದ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚುವ ಕೆಮರಾಗಳ ಅಳವಡಿಕೆಯಾಗಲಿದೆ. ಅಲ್ಲದೆ ಪೊಲೀಸ್ ಇಲಾಖೆಯಿಂದ ಮತ್ತೆ 75 ಕಡೆ ಸಿಸಿ ಕೆಮರಾ ಅಳವಡಿಕೆಯಾಗಲಿದೆ ಎಂದು ತಿಳಿಸಿದರು.
ಕ್ಲಾಕ್ ಟವರ್-ಆರ್‌ಟಿಒ-ಹ್ಯಾಮಿಲ್ಟನ್(ಸ್ಟೇಟ್ ಬ್ಯಾಂಕ್) ಸರ್ಕಲ್‌ವರೆಗೆ ಈಗ ಇರುವ ಏಕಮುಖ ಸಂಚಾರವನ್ನು ದ್ವಿಮುಖ ಸಂಚಾರವಾಗಿಸಲು ಬೇಡಿಕೆ ಇರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಎ.ಬಿ.ಶೆಟ್ಟಿ ವೃತ್ತ ಇದ್ದ ಸ್ಥಳದಲ್ಲಿ ವೃತ್ತ ಮತ್ತೆ ರಚಿಸುವಂತೆ ಹಲವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಅವರು, ಈಗ ಸಂಚಾರ ಸುಗಮವಾಗಿರುವ ಬಗ್ಗೆ ಅಭಿಪ್ರಾಯಗಳಿವೆ, ಆದರೆ ಕೆಲವು ಸಮಸ್ಯೆಗಳ ಬಗ್ಗೆಯೂ ದೂರುಗಳು ಬಂದಿವೆ. ಇದರ ಬಗ್ಗೆ ಎರಡನೇ ಸುತ್ತಿನ ಸಭೆ ಶೀಘ್ರದಲ್ಲೇ ನಡೆಯಲಿದೆ. ಆ ಬಳಿಕ ಏಕಮುಖ ಸಂಚಾರ ಬದಲಾವಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಖಾಸಗಿ ಬಸ್‌ಗಳಲ್ಲಿ ಕರ್ಕಶ ಹಾರ್ನ್ ಬಳಕೆ ಮಾಡುವ ಚಾಲಕರ ಲೈಸನ್ಸ್ ಅಮಾನತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲು, ಬಸ್‌ನ್ನು ಒಂದು ದಿನದ ಮಟ್ಟಿಗೆ ಸಾರಿಗೆ ಇಲಾಖೆಯ ಸುಪರ್ದಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು. ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಿ. ಆದರೆ ಬಸ್‌ಗಳನ್ನು ವಶಕ್ಕೆ ಪಡೆದರೆ ಪರ್ಯಾಯವಾಗಿ ಮತ್ತೊಂದು ಬಸ್‌ನ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಪ್ರಯಾಣಿಕರಿಗೆ ತೊಂದರೆಯಾಗಬಹುದು ಎಂದು ಸಭೆಯಲ್ಲಿದ್ದ ಕೆಲವು ಮಂದಿ ನಾಗರಿಕರು ಹೇಳಿದರು.
ನಗರದ ಹಲವೆಡೆ ಹೊಂಡ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಈಗ ಮಳೆ ಬಿಡುವು ನೀಡಿರುವುದರಿಂದ ಕೂಡಲೇ ಪಾಲಿಕೆಯವರು ಗುಂಡಿ ಮುಚ್ಚುವ ಕಾಮಗಾರಿ ನಡೆಸಬೇಕು ಎಂದು ರಸ್ತೆ ಸುರಕ್ಷಾ ಸಮಿತಿಯ ಸದಸ್ಯ ಜಿ.ಕೆ.ಭಟ್ ಒತ್ತಾಯಿಸಿದರು.
ನಗರದ ಲೇಡಿಗೋಶನ್, ಕಲ್ಪನಾ ಸ್ವೀಟ್ಸ್, ರೂಪವಾಣಿ ಟಾಕೀಸ್ ಮತ್ತು ಅಕ್ಕಪಕ್ಕದ ಪರಿಸರದ ಫುಟ್‌ಪಾತ್, ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳು ತುಂಬಿ ಹೋಗಿದ್ದಾರೆ. ಇದರಿಂದ ವಾಹನಗಳು, ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ. ಅಲ್ಲದೆ ನಗರದಲ್ಲಿ ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳನ್ನಿಟ್ಟು ಎಲ್ಲೆಂದರಲ್ಲಿ ಫಾಸ್ಟ್‌ಫುಡ್ ಮತ್ತಿತರ ವ್ಯಾಪಾರ ಮಾಡಲಾಗುತ್ತಿದೆ. ಆ ವಾಹನಗಳ ಆರ್‌ಸಿ ಮತ್ತಿತರ ದಾಖಲೆಗಳಿಲ್ಲ. ಅವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ಕೆಲವು ಬಸ್‌ಗಳು ರೂಟ್ ತಪ್ಪಿಸಿ ಸಂಚರಿಸುತ್ತಿರುವ ಕುರಿತು ಸಾರ್ವಜನಿಕರು ದೂರಿದಾಗ, ಬಸ್‌ಗಳಿಗೆ ಜಿಪಿಎಸ್ ಅಳವಡಿಸಿ ಅದನ್ನು ಸ್ಮಾರ್ಟ್‌ಸಿಟಿ ಕಮಾಂಡ್ ಸೆಂಟರ್‌ಗೆ ಟ್ಯಾಗ್ ಮಾಡಲಾಗಿತ್ತು. ಆದರೆ ಕೆಲವು ಚಾಲಕರು ಜಿಪಿಎಸ್‌ನ ಸಂಪರ್ಕ ತೆಗೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಬಸ್ ಮಾಲೀಕರು ತಿಳಿಸಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಬಸ್ ಮಾಲೀಕರಿಗೆ ಸೂಚಿಸಿದರು.
ಆಟೋರಿಕ್ಷಾಗಳ ವಿರುದ್ಧ ಕ್ರಮ
ಕೆಲವು ಆಟೋರಿಕ್ಷಾಗಳು ಪ್ರಯಾಣಿಕರಿಂದ ಹೆಚ್ಚು ಬಾಡಿಗೆ ದರ ವಸೂಲಿ ಮಾಡುತ್ತಾರೆ ಎಂಬ ದೂರುಗಳಿಂದಾಗಿ ಪ್ರಾಮಾಣಿಕ ಆಟೋರಿಕ್ಷಾ ಚಾಲಕರಿಗೆ ನೋವಾಗಿದೆ. ಹಾಗಾಗಿ ಯಾರು ಅಧಿಕ ದರ ವಸೂಲಿ ಮಾಡುತ್ತಾರೋ ಅಂತಹ ಆಟೋಚಾಲಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ. ನಕಲಿ ಪರವಾನಗಿ ಬಗ್ಗೆಯೂ ತಪಾಸಣೆ ನಡೆಸಬೇಕು ಎಂದು ಆಟೋರಿಕ್ಷಾ ಚಾಲಕರೋರ್ವರು ಮನವಿ ಮಾಡಿದರು.
ಎಸಿಪಿ ಗೀತಾ ಕುಲಕರ್ಣಿ, ಎಆರ್‌ಟಿಒ ವಿಶ್ವನಾಥ ನಾಯ್ಕ, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಕಾಂತ್, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್, ಗೂಡ್ಸ್ ಟೆಂಪೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಸಿರಾಜ್, ಎ.ಕೃಷ್ಣನ್, ದಿಲ್‌ರಾಜ್ ಆಳ್ವ ಮೊದಲಾದವರು ವಿವಿಧ ಸಂಚಾರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.