

ಮಂಗಳೂರು: ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಪೊಲೀಸರು ನಗರದ ವಿವಿಧೆಡೆ ಕೇರಳದ ಮೂವರನ್ನು ಸಹಿತ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.
ಗಾಂಜಾ ಸೇವನೆ ಮಾಡಿ ನೆಲ್ಲಿಕಾಯಿ ರಸ್ತೆ ಬಳಿ ತೂರಾಡುತ್ತಿದ್ದ ಕೇರಳ ಕೋಝಿಕೋಡ್‌ನ ರೋಷನ್(21)ನನ್ನು ಡಿ.3ರಂದು ಮಧ್ಯಾಹ್ನ 1 ಗಂಟೆಗೆ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ 2.15ಕ್ಕೆ ಬರ್ಕೆ ಪೊಲೀಸರು ಕೇರಳ ಕಣ್ಣೂರಿನ ಅಭಿನವ್ ಸಿ.ಕೆ(21)ಯನ್ನು ಹಾಗೂ ಬಿಬಿ ಅಲಾಬಿ ರಸ್ತೆಯ ಬಳಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಕೇರಳ ಅಲಪ್ಪುಜಾದ ಅಲೆಕ್ಸ್ ಎಂ.ಎಸ್(22)ನನ್ನು ಬಂಧಿಸಿದ್ದಾರೆ.
ಬೆಂಗ್ರೆ ಗ್ರಾಮದ ಕಡಪರ ಸಮುದ್ರ ಕಿನಾರೆಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಕಸಬಾ ಬೆಂಗ್ರೆ ನಿವಾಸಿ ಮೊಹಮ್ಮದ್ ಫಿರೋಜ್ ಯಾನೆ ಪಿಜ್ಜು (26) ಎಂಬಾತನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಗ್ರಾಮದ ಮೊಗವೀರಪಟ್ಣ ಪರಿಸರದಲ್ಲಿ ಮಾದಕವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಸಂದೀಪ್ ಎಸ್. ಕೋಟ್ಯಾನ್, ವಿಕಾಸ್ ಆರ್. ಕೋಟ್ಯಾನ್ ಅವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.