

ಮಂಗಳೂರು: ಏಕಾಏಕಿ ಲಕ್ಷಾಂತರ ರೂ. ಬಿಲ್, ಮೀಟರ್ ದುರಸ್ತಿ ಪಡಿಸಿದರೂ ಅಸರ್ಮಪಕ ಬಿಲ್, ಪ್ರತಿ ತಿಂಗಳು ವಿತರಣೆಯಾಗದ ಬಿಲ್… ಹೀಗೆ ವಿವಿಧ ರೀತಿಯ ದೂರು ಅರ್ಜಿಗಳೊಂದಿಗೆ ಬುಧವಾರ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಅಹವಾಲು ಸಲ್ಲಿಸುವ ಪ್ರಕ್ರಿಯೆಗೆ ಲಾಲ್‌ಬಾಗ್‌ನ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಸಾಕ್ಷಿಯಾಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಇತ್ಯರ್ಥಪಡಿಸಲು ಸಾಧ್ಯವಾಗುವ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಬಿಲ್ ಮನೆಗಳಿಗೆ ಪ್ರತಿ ತಿಂಗಳು ನೀಡುತ್ತಿಲ್ಲ. ನೀಡಿದ ಬಿಲ್‌ನಲ್ಲಿ ನೂರಾರು ಪಟ್ಟು ಹೆಚ್ಚಿನ ಮೊತ್ತ 12,000ಕ್ಕೂ ಅಧಿಕ ಮೀಟರ್‌ಗಳು ಎಂಎನ್‌ಆರ್ (ಮೀಟರ್ ನಾಟ್ ರೀಡಿಂಗ್) ಆಗಿವೆ. ಬಿಲ್‌ಗಳಲ್ಲಿ ಸಾಕಷ್ಟು ಲೋಪದೋಷಗಳು ಇವೆ ಎಂದು ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರನೇಕರು ದೂರಿದ್ದರು. ಆ ಸಂದರ್ಭ ನೀರಿನ ಬಿಲ್‌ನ ಪರಿಷ್ಕರಣೆಯ ಸಭೆ ಮಾಡುವುದಾಗಿ ಹೇಳಿದಂತೆ ಪತ್ರಿಕಾ ಪ್ರಕಟನೆಯ ಮೂಲಕ ಸಮಸ್ಯೆ ಇರುವವರು ಅಹವಾಲು ಸಲ್ಲಿಸಲು ತಿಳಿಸಲಾಗಿತ್ತು. ದೂರುಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ. ತಂತ್ರಾಂಶದಲ್ಲಿನ ದೋಷದಿಂದ ಸಮಸ್ಯೆ ಉಂಟಾಗಿದೆ. ಅಧಿಕ ಮೊತ್ತದ ಬಿಲ್‌ಗಳನ್ನು ಸ್ಥಳದಲ್ಲಿಯೇ ಪರಿಷ್ಕರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಬುಧವಾರ ಸುರತ್ಕಲ್ ವಲಯ ಕಚೇರಿಯಲ್ಲಿ ಈ ಅಹವಾಲು ಸ್ವೀಕಾರ ನಡೆಯಲಿದೆ. ಪಾಲಿಕೆಯಲ್ಲಿ ಪ್ರತೀ ಎರಡು ತಿಂಗಳಿಗೊಮ್ಮೆ ನೀರಿನ ಬಿಲ್ ಅದಾಲತ್ ನಡೆಸಲಾಗುವುದು. ಸಮಸ್ಯೆ ಇರುವವರು ಅಹವಾಲು ಸಲ್ಲಿಸಿ, ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಉಮ ಮೇಯರ್ ಸುನಿತಾ, ಸದಸ್ಯರಾದ ಶೈಲೇಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.