

ಮಂಗಳೂರು: ಮಳೆಗಾಲದಲ್ಲಿ ತುರ್ತು ಸಮಸ್ಯೆಗಳಿಗೆ ಕರೆ ಮಾಡಿದಾಗ ಪಾಲಿಕೆ, ಅರಣ್ಯ, ಅಗ್ನಿಶಾಮಕ ಅಧಿಕಾರಿ ವರ್ಗ ಸ್ಪಂದನೆ ನೀಡುತ್ತಿಲ್ಲ ಎಂದು ಪಾಲಿಕೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಮಳೆಗಾಲದ ಪೂರ್ವ ಸಿದ್ಧತಾ ಸಭೆಯಲ್ಲಿ ಅಪಾಯಕಾರಿ ಮರ ತೆರವು, ಒಳಚರಂಡಿ, ಹೂಳೆತ್ತುವುದು, ತಗ್ಗು ಪ್ರದೇಶಗಳ ಜಲಾವೃತ ಮೊದಲಾದ ಸಮಸ್ಯೆಗಳಿಗೆ ಕರೆ ಮಾಡಿದಾಗ ಅಧಿಕಾರಿ ವರ್ಗದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಯಿತು.
ನಗರ ವ್ಯಾಪ್ತಿಯಲ್ಲಿ ಹಲವು ಕಡೆ ಅಪಾಯಕಾರಿ ಮರಗಳಿದ್ದು, ಅವುಗಳ ಗೆಲ್ಲು ಕಡಿಯಬೇಕಾಗಿದೆ. ಮುಂಗಾರು ಆರಂಭಗೊಂಡರೂ ಈ ಕ್ರಮ ಆಗಿಲ್ಲ. ಪಂಪ್ವೆಲ್, ಕೊಟ್ಟಾರಚೌಕಿ ಮೊದಲಾದ ಕಡೆಗಳಲ್ಲಿ ಮಳೆ ಬಂದಾಗ ಜಲಾವೃತಗೊಂಡು ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗುತ್ತಿದೆ ಎಂದು ಸದಸ್ಯ ನವೀನ್ ಡಿಸೋಜ ಹೇಳಿದರು.
ಬೋಳೂರುನಲ್ಲಿ ಅಪಾಯಕಾರಿ ಮರ ಕಡಿಯಲು ಹೇಳಿದಾಗ ಅಗ್ನಿಶಾಮಕದಳದ ಅಧಿಕಾರಿ ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯೆ ಸಂಗೀತಾ ನಾಯಕ್, ವೈದ್ಯನಾಥ ನಗರದಲ್ಲಿ ಅಂಗನವಾಡಿ ಮಾಡಿನ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ತೆಗೆಯಲು ತಿಳಿಸಿದಾಗ ಪಾಲಿಕೆ ಹಾಗೂ ಅರಣ್ಯ ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.
ತಡೆಗೋಡೆ ಶೀಘ್ರ ನಿರ್ಮಿಸಿ: ನಗರದಲ್ಲಿರುವ ಅಪಾಯಕಾರಿ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಶೀಘ್ರ ಆಗಬೇಕಾಗಿದೆ. ಮರಳುಚೀಲ ತಾತ್ಕಾಲಿಕವಾಗಿದ್ದು, ಈಗಾಗಲೇ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹೂಳೆತ್ತುವ ಕಾಮಗಾರಿ ಹಲವು ಕಡೆಗಳಲ್ಲಿ ಬಾಕಿಯಾಗಿದೆ ಎಂದು ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಹೇಳಿದರು.
ಹೂಳೆತ್ತುವ ಕೆಲಸ ಬಾಕಿ ಇರುವ ಪ್ರದೇಶಗಳ ಪಟ್ಟಿ ನೀಡುವಂತೆ ಮೇಯರ್ ಸೂಚಿಸಿದರು. ಈಗಾಗಲೇ 60 ವಾರ್ಡ್ಗಳಿಗೆ ಇಂಜಿನಿಯರ್ಗಳನ್ನು ‘ಇನ್ಸಿಡೆಂಟ್ ಕಮಾಂಡರ್’ ಎಂದು ನೇಮಕ ಮಾಡಲಾಗಿದ್ದು, ಅವರ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಯುಕ್ತ ಆನಂದ್ ಸಿ.ಎಲ್. ತಿಳಿಸಿದರು.
ಪರಿಹಾರ ಕಾಣದ ಅಂಡರ್ಪಾಸ್ ಸಮಸ್ಯೆ : ರಾಷ್ಟ್ರೀಯ ಹೆದ್ದಾರಿ 73ರಲ್ಲಿರುವ ಪಡೀಲ್ ಅಂಡರ್ ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯವರು ಚರಂಡಿ ಸಮರ್ಪಕವಾಗಿ ಮಾಡದ ಕಾರಣ ಮಳೆಗಾಲದಲ್ಲಿ ನೀರು ಬ್ಲಾಕ್ ಆಗುತ್ತಿದೆ. ನಾಲ್ಕು ವರ್ಷಗಳಿಂದ ದೂರು ನೀಡಿದರೂ ಇನ್ನೂ ಸಮಸ್ಯೆ ಬಗೆ ಹರಿದಿಲ್ಲ ಎಂದು ಸದಸ್ಯೆ ರೂಪಶ್ರೀ ದೂರಿದರು. ಬಜಾಲ್ ಅಂಡರ್ಪಾಸ್ನಲ್ಲೂ ಪಂಪ್ ಹಾಕಿ ನೀರು ತೆಗೆಯುವ ಸ್ಥಿತಿ ಇದೆ. ಒಳಚಂರಡಿ ಲೈನ್ ಬದಲಾವಣೆ ಮಾಡಬೇಕು ಎಂದು ವಾರ್ಡ್ನ ಸದಸ್ಯೆ ಶೋಭಾ ಪೂಜಾರಿ ಒತ್ತಾಯಿಸಿದರು. ಕಾಟಿಪಳ್ಳದಲ್ಲಿ ಎಲ್ಲಾ ಕಡೆ ಒಳಚರಂಡಿ ಬ್ಲಾಕ್ ಆಗಿ ಉಕ್ಕಿ ಹರಿಯುತ್ತಿದೆ ಎಂದು ಸದಸ್ಯ ಲೋಕೇಶ್ ಬೊಳ್ಳಾಜೆ ಹೇಳಿದರು.
ಅಧಿಕಾರಿಗಳಲ್ಲಿ ಸಮನ್ವಯತೆ ಅವಶ್ಯ: ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯೆಗಳಾಗುತ್ತಿದೆ. ಆಯುಕ್ತರು ಅಧಿಕಾರಿಗಳ ಜತೆ ಸಭೆ ನಡೆಸಿ ಸೂಚನೆ ನೀಡಬೇಕು. ಮಂಗಳೂರಿನಲ್ಲಿ ಭೂ ಕುಸಿತ ಸಮಸ್ಯೆ ಇದೆ. ತಡೆಗೋಡೆಗಳನ್ನು ಮಾಡಬೇಕಾಗಿದೆ. ರಾಜ ಕಾಲುವೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದಕ್ಕಾಗಿ ವ್ಯವಸ್ಥಿತ, ವೈಜ್ಞಾನಿಕವಾಗಿ ರಾಜ ಕಾಲುವೆಗಳನ್ನು ಮಾಡಬೇಕಾಗಿದೆ. ರಸ್ತೆಗಳ ಅಗೆತ ನಿರಂತರವಾಗಿ ನಡೆಯುತ್ತಿದ್ದು, ಕಡಿವಾಣ ಹಾಕಬೇಕು. ಅರಣ್ಯ, ಮೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳೊಂದಿಗೆ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸಾರ್ವಜನಿಕರಿಗೆ ಇನ್ಸಿಂಡೆಂಟ್ ಕಮಾಂಡರ್ಗಳ ಸಂಪರ್ಕ ಸಂಖ್ಯೆ ನೀಡಬೇಕು ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು.
ಉಪಮೇಯರ್ ಸುನಿತಾ, ಪ್ರತಿಪಕ್ಷ ನಾಯಕ ಪ್ರವೀಣ್ಚಂದ್ರ ಆಳ್ವ ಉಪಸ್ಥಿತರಿದ್ದರು.
ಆಯುಕ್ತರೇ ಕರೆ ಸ್ವೀಕರಿಸುವುದಿಲ್ಲ!
ಪಾಲಿಕೆ ಸದಸ್ಯರು ಯಾವುದಾದರೂ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದಾಗ ಇಂಜಿಯರ್ಗಳು ಫೋನ್ ಎತ್ತುವುದಿಲ್ಲ. ಕೊನೆಗೆ ಆಯುಕ್ತರಿಗೆ ಕರೆ ಮಾಡಿದಾಗ ಅವರೂ ಸ್ವೀಕರಿಸುವುದಿಲ್ಲ. ವಾಟ್ಸಾೃಪ್ ಸಂದೇಶ ಮಾಡಿದರೆ ಅದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಸಾರ್ವಜನಿಕರು ನಮ್ಮಲ್ಲಿ ಪ್ರಶ್ನೆ ಮಾಡುತ್ತಾರೆ. ನಾವು ಸಂಬಂಧಪಟ್ಟವರ ಗಮನಕ್ಕೆ ತರಲು ಯತ್ನಿಸಿದರೆ ಹೀಗೆ ಮಾಡುವುದಾ? ಅಧಿಕಾರಿಗಳಿಗೆ ಮಾನವೀಯತೆ ಇಲ್ಲವೇ? ಎಂದು ಸದಸ್ಯೆ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ಗ್ಯಾಂಗ್ಮೆನ್ಗಳ ನೇಮಕ
ಮಳೆಗಾಲದಲ್ಲಿ ರಾತ್ರಿ ವೇಳೆ ಯಾವುದೇ ಸಮಸ್ಯೆಗಳು ಉಂಟಾದರೆ ತಕ್ಷಣ ಸ್ಪಂದಿಸಲು ರಾತ್ರಿ ಗ್ಯಾಂಗ್ಮೆನ್ಗಳ ನೇಮಕ ಮಾಡಲಾಗುವುದು. ತಲಾ 30 ವಾರ್ಡ್ಗಳಿಗೆ ಒಂದು ಜೆಸಿಬಿ ವ್ಯವಸ್ಥೆ ಮಾಡಲಾಗುವುದು. ಪ್ರತೀ ವಾರ್ಡ್ನ ಇನ್ಸಿಡೆಂಟ್ ಕಮಾಂಡರ್ಗಳ ಮೊಬೈಲ್ ಸಂಖ್ಯೆ ಸಾರ್ವಜನಿಕರಿಗೆ ನೀಡಲಾಗುವುದು. ಎಲ್ಲಾ ಅಧಿಕಾರಿಗಳು ನಮ್ಮ ಮಂಗಳೂರು ಎನ್ನುವ ಭಾವನೆಯಿಂದ ಕೆಲಸ ಮಾಡಿದಾಗ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.